ಸೋಮವಾರಪೇಟೆ, ಸೆ. 15: ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ 65 ವರ್ಷ ಪ್ರಾಯದ ವೃದ್ಧೆಯನ್ನು ಹತ್ಯೆ ಮಾಡಲಾಗಿದ್ದು, ಚಿನ್ನಾಭರಣಕ್ಕಾಗಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕಳೆದ ಸೋಮವಾರ ಅಥವಾ ಮಂಗಳವಾರ ನಡೆದಿರಬಹುದಾಗಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.ಇಗ್ಗೋಡ್ಲು ಗ್ರಾಮದ ದಿ. ಅಯ್ಯಣ್ಣ ಅವರ ಪತ್ನಿ ಮಂದೆಯಂಡ ಸೀತಮ್ಮ ಅಲಿಯಾಸ್ ಕಾವೇರಿ (65) ಎಂಬವರೇ ಹತ್ಯೆಯಾದವರಾಗಿದ್ದು, ಕಳೆದ ಅನೇಕ ಸಮಯಗಳಿಂದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಇವರ ಮಗಳು ದೇವಕ್ಕಿ ಮಡಿಕೇರಿಯಲ್ಲಿ ನೆಲೆಸಿದ್ದರೆ ಮಗ ಸೋಮಯ್ಯ ಬೆಂಗಳೂರಿನಲ್ಲಿ ಗನ್‍ಮ್ಯಾನ್ ಆಗಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಯಾರೋ ದುಷ್ಕರ್ಮಿಗಳು ಹತ್ಯೆಗೈದಿದ್ದು, ಚಿನ್ನಾಭರಣ ಮತ್ತು ಹಣಕ್ಕಾಗಿ ಮನೆಯೊಳಗಿನ ಕಪಾಟುಗಳನ್ನು ಜಾಲಾಡಿರುವದು ಬೆಳಕಿಗೆ ಬಂದಿದೆ.

ಕಳೆದ ಸೋಮವಾರದಂದು ಇಗ್ಗೋಡ್ಲು ಗ್ರಾಮದಲ್ಲಿಯೇ ಇರುವ ಸಂಬಂಧಿಕರ ಮನೆಗೆ ತೆರಳಿ ಸಂಜೆ ಹಿಂತಿರುಗಿದ್ದ

(ಮೊದಲ ಪುಟದಿಂದ) ಸೀತಮ್ಮ ಇಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕಳೆದ ಮಂಗಳವಾರದಿಂದ ಸೀತಮ್ಮ ಅವರ ಮೊಬೈಲ್ ಸ್ವಿಚ್‍ಆಫ್ ಆಗಿದ್ದು, ನೆಂಟರಿಷ್ಟರು ಕರೆ ಮಾಡಿ ಸ್ಪಂದಿಸದ ಹಿನ್ನೆಲೆ ಇಂದು ಮನೆಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಕುಟುಂಬಸ್ಥರು ಸೋಮವಾರಪೇಟೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮನೆಯ ಹೊರಭಾಗದ ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಒಡೆದು ಒಳತೆರಳಿ ಪರಿಶೀಲಿಸಿದಾಗ ಸೀತಮ್ಮ ಹತ್ಯೆಯಾಗಿರುವದು ಕಂಡುಬಂದಿದೆ. ಮೂರ್ನಾಲ್ಕು ದಿನದ ಹಿಂದೆ ಕೃತ್ಯ ನಡೆದಿರುವ ಹಿನ್ನೆಲೆ ಮೃತದೇಹ ಕೊಳೆಯಲಾರಂಭಿಸಿತ್ತು.

ಮೃತೆ ಸೀತಮ್ಮ ಮುಖದ ಮೇಲೆ ಅಕ್ಕಿ ಪುಡಿ ಮತ್ತು ಹಣೆಯ ಮೇಲೆ ಒಂದು ರೂಪಾಯಿಯ ಕಾಯಿನ್ ಇಡಲಾಗಿತ್ತು. ಇದರೊಂದಿಗೆ ಒಳ ಭಾಗದ ಬಾಗಿಲನ್ನು ಒಳಗಿನಿಂದಲೇ ಲಾಕ್ ಮಾಡಿದ್ದರೆ, ಮುಂಭಾಗದ ಬಾಗಿಲಿಗೆ ಹೊರಗಿನಿಂದ ಬೀಗ ಜಡಿದು ಕೀಲಿಕೈ ತೆಗೆದುಕೊಂಡು ಹೋಗಿರುವದನ್ನು ಗಮನಿಸಿದರೆ ಇದೊಂದು ವ್ಯವಸ್ಥಿತ ಹತ್ಯೆ ಎಂಬದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಮೃತರ ಮಗಳು ದೇವಕಿ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಡಿವೈಎಸ್‍ಪಿ ಸಂಪತ್‍ಕುಮಾರ್, ಎಎಸ್‍ಐಗಳಾದ ಸುಂದರ್ ಸುವರ್ಣ, ಪುಟ್ಟಪ್ಪ, ಶಿವಲಿಂಗಯ್ಯ ಸೇರಿದಂತೆ ಸಿಬ್ಬಂದಿ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಡಿಕೇರಿಯಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ.

ಮೃತೆ ಸೀತಮ್ಮ ಅವರಿಗೆ ಪರಿಚಯವಿರುವವರೇ ಕೃತ್ಯ ಎಸಗಿದ್ದಾರೋ ಅಥವಾ ದರೋಡೆ ಮಾಡುವ ಅಪರಿಚಿತ ತಂಡದ ಕೃತ್ಯ ಇದಾಗಿರಬಹುದೋ ಎಂಬ ಸಂಶಯ ಸ್ಥಳೀಯರಲ್ಲಿ ಮೂಡಿದೆ. ಸಾವಿಗೆ ನಿಖರ ಕಾರಣ ತಿಳಿಯುವ ಸಲುವಾಗಿ ಮೃತದೇಹದ ಮಾದರಿಗಳನ್ನು ಸಂಗ್ರಹಿಸಿ ಫೊರೆನ್ಸಿಕ್ ಲ್ಯಾಬ್‍ಗೆ ಕಳುಹಿಸಲಾಗಿದೆ.

ಸ್ಥಳಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾದಾಪುರ ಗ್ರಾ.ಪಂ. ಸದಸ್ಯ ನಾಪಂಡ ಉಮೇಶ್ ಸೇರಿದಂತೆ ಇತರರು ತೆರಳಿ ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ರಾಜೇಂದ್ರ ಪ್ರಸಾಧ್ ಭೇಟಿ ನೀಡಿದ್ದರು.