ಭಾಗಮಂಡಲ, ಸೆ. 15: ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಇತ್ತೀಚೆಗೆ ಪುಷ್ಕರ ಉತ್ಸವ ಜೊತೆಗೆ ಪ್ರವಾಸಿಗರ ದಟ್ಟಣೆಯಿಂದ ಎರಡೂ ಕ್ಷೇತ್ರಗಳು ಮಾಲಿನ್ಯಗೊಂಡು ವಾತಾವರಣವೇ ಕಲುಷಿತಗೊಳ್ಳುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಥಳೀಯವಾಗಿ, ಆಡಳಿತಾತ್ಮಕವಾಗಿ ಉತ್ತಮ ಸ್ಪಂದನ ದೊರಕಿದೆ.ಇಂದು ಭಾಗಮಂಡಲ ಗ್ರಾಮ ಪಂಚಾಯಿತಿ ಸಭೆ ಅಧ್ಯಕ್ಷೆ ಸುಮಿತ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಭಾಗಮಂಡಲದಲ್ಲಿ ಶುಚಿತ್ವ ಕಾರ್ಯವನ್ನು ಪಂಚಾಯಿತಿ ಟೆಂಡರ್ ಮೂಲಕ ವಹಿಸಲಾಗಿದೆ. ಪ್ರತಿನಿತ್ಯ ರೂ. 1 ಸಾವಿರ ಹಣವನ್ನು ಕೂಡ ಪಾವತಿಸಲಾಗುತ್ತಿದೆ. ಆದರೆ ಈ ಕಾರ್ಯವು ಸಮರ್ಪಕವಾಗಿ ನಡೆಯದಿರುವದರಿಂದ ಗುತ್ತಿಗೆದಾರರನ್ನು ಕರೆಸಿ ಮುನ್ನೆಚ್ಚರಿಕೆ ನೀಡಲಾಗಿದೆ. ವಾಹನ ನಿಲುಗಡೆ ಪ್ರದೇಶವೂ ಸೇರಿದಂತೆ ಸಂಗಮದ ಸುತ್ತಮುತ್ತ ಶುಚಿತ್ವದ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಟೆಂಡರ್ ರದ್ದುಗೊಳಿಸುವದಾಗಿ ಎಚ್ಚರಿಕೆ ನೀಡಿರುವದಾಗಿಯೂ ಅಧ್ಯಕ್ಷೆ ಸಭೆಗೆ ಮಾಹಿತಿಯಿತ್ತರು.

ಶೌಚಾಲಯಗಳಲ್ಲಿ ಶುಚಿತ್ವದ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಅಶೋಕ್ ಅವರು ವಿದ್ಯುತ್ ವೋಲ್ಟೇಜ್ ಕೊರತೆಯಿಂದಾಗಿ ನೀರು ಸರಬರಾಜಿಲ್ಲದೆ ತೊಂದರೆ ಉಂಟಾಗಿತ್ತು. ಇದೀಗ ಶೌಚಾಲಯ ಶುಚಿತ್ವ ಕಾರ್ಯವನ್ನು ನಿರ್ವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಸದಸ್ಯ ಪುರುಷೋತ್ತಮ ಅವರು ಮಾತನಾಡಿ ಕ್ಷೇತ್ರದ ತಕ್ಷಕ ವನದಲ್ಲಿ ಪ್ರವಾಸಿಗರು ಅರಿವಿಲ್ಲದೆ ಮೂತ್ರ ವಿಸರ್ಜನೆ ಇತ್ಯಾದಿ ಮೂಲಕ ಅಪವಿತ್ರಗೊಳಿಸುತ್ತಿದ್ದಾರೆ. ಈ ಸ್ಥಳದಲ್ಲಿ ದೇವಾಲಯ ವತಿಯಿಂದಲೇ ಸಿಬ್ಬಂದಿಯನ್ನು ನಿಯೋಜಿಸುವಂತೆ ಕೋರಿದರು. ಉಪಾಧ್ಯಕ್ಷೆ ಭವಾನಿ ಅವರು ಮಾತನಾಡಿ, ಭಾಗಮಂಡಲದಲ್ಲಿ ಪ್ರವಾಸಿಗರ ಆಗಮನದಿಂದ ಕಸದ ಪ್ರಮಾಣ ಹೆಚ್ಚಾಗುತ್ತ ಇದೆ. ಕಸದ ರಾಶಿ ತುಂಬುತ್ತಿದೆ. ಪ್ರಸಕ್ತ ಆಸ್ಪತ್ರೆಯ ಬಳಿಯ ಸಣ್ಣ ಜಾಗದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಪಂಚಾಯಿತಿ ಯಿಂದ 3 ಎಕರೆ ಜಾಗ ಗುರುತಿಸಿ ಕಸ ವಿಲೇವಾರಿಗೆ ಪ್ರಯತ್ನಿಸಿದಾಗ ಅರಣ್ಯ ಇಲಾಖೆ ಇದಕ್ಕೆ ತಡೆಯೊಡ್ಡಿದೆ. ಜಿಲ್ಲಾಡಳಿತವು ಈ ಗಂಭೀರ ಸಮಸ್ಯೆಯನ್ನು ಪರಿಹರಿಸಿ ಸಾವಿರಾರು ಯಾತ್ರಾರ್ಥಿಗಳು ಬರುವ ಈ ಕ್ಷೇತ್ರದಲ್ಲಿ ಕಸ ವಿಲೇವಾರಿಗೆ 3 ಎಕರೆ ಜಾಗ ಒದಗಿಸುವಂತೆ ಅವರು ಮನವಿ ಮಾಡಿದರು. ಸದಸ್ಯರುಗಳಾದ ಪ್ರಮೀಳಾ ಮತ್ತು ಮತ್ತಾರಿ ರಾಜ ಇವರುಗಳು ಮಾತನಾಡಿ, ಸಂಜೆ 6 ಗಂಟೆ ಬಳಿಕ ಯಾತ್ರಾರ್ಥಿಗಳನ್ನು ತಲಕಾವೇರಿಗೆ ತೆರಳದಂತೆ ತಡೆಗಟ್ಟಬೇಕಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಜಾಗೃತಿ ವಹಿಸಲಿ ಎಂದು ಸಲಹೆಯಿತ್ತರು. ಸದಸ್ಯ ರಾಜಾರೈ ಮಾತನಾಡಿ, ಸಚಿವ ಜಾರ್ಜ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಭಾಗಮಂಡಲಕ್ಕೆ ಜಾತ್ರೆಯ ಸಂದರ್ಭ ರೂ. 25 ಲಕ್ಷ ಹೆಚ್ಚಿಗೆ ಅನುದಾನ ಕಲ್ಪಿಸುವಂತೆ ಮನವಿ ಮಾಡಿದ್ದು, ಇದುವರೆಗೂ ಈಡೇರಿಲ್ಲ. ಈ ಬಗ್ಗೆ ಈಗಿನ ಉಸ್ತುವಾರಿ ಸಚಿವರು, ಶಾಸಕರು ಗಮನ ಹರಿಸಿ ಅನುದಾನ ಒದಗಿಸುವಂತೆ ಕೋರಿದರು. ಸದಸ್ಯ ಭಾಸ್ಕರ್ ಮಾತನಾಡಿ, ಜಾತ್ರೆ ಸಂದರ್ಭ ಭಾಗಮಂಡಲ ಕ್ಷೇತ್ರದಲ್ಲಿ 400 ಪೊಲೀಸರನ್ನು ನಿಯೋಜಿಸಲಾಗುತ್ತದೆ. ಆದರೆ ಇತ್ತೀಚಿನ ಬೆಳವೆಣಿಗೆಯಲ್ಲಿ ನಿರಂತರ ಸಾವಿರಾರು ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಕೇವಲ ಒಂದೆರಡು ಪೊಲೀಸರು ಮಾತ್ರ ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸರಾಸರಿ 15 ಮಂದಿ ಪೊಲೀಸರನ್ನಾದರೂ ನಿಯೋಜಿಸುವಂತೆ ಮನವಿ ಮಾಡಿದರು.

ಜಾತ್ರೆ ಸಂದರ್ಭ ಅಂಗಡಿಗಳಿಗೆ ಅನುಮತಿ ನೀಡುವಾಗ ಅಂಗಡಿಗಳ ಸುತ್ತಮುತ್ತ ಶುಚಿತ್ವ ಕಾಪಾಡುವಂತೆ ನಿರ್ಬಂಧ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಲ್ಲದೆ ಜಾತ್ರೆಗೆ ಮುನ್ನ ಭಾಗಮಂಡಲದಲ್ಲಿ ರಸ್ತೆಗಳ ಹೊಂಡ ಗುಂಡಿಗಳನ್ನು ಮುಚ್ಚುವಂತೆಯೂ ನಿರ್ಧರಿಸಲಾಯಿತು.