ವೀರಾಜಪೇಟೆ, ಸೆ. 15: ಇಲ್ಲಿಗೆ ಸಮೀಪದ ದೇವಣಗೇರಿ ಬಿ.ಸಿ. ಪ್ರೌಢಶಾಲೆಯಲ್ಲಿ ಬೆಂಗಳೂರಿನ ಟೋಮಿ ಹಿಲ್ ಫಿಗರ್ ಅರವಿಂದ್ ಫ್ಯಾಷನ್ ಪ್ರೈವೆಟ್ ಲಿಮಿಟೆಡ್ ಮತ್ತು ರೋಟರಿ ಸಂಸ್ಥೆ, ವೀರಾಜಪೇಟೆ ವತಿಯಿಂದ ನಿರ್ಮಿಸಲಾದ ಮಳೆ ಕೊಯ್ಲು ಘಟಕವನ್ನು ರೋಟರಿ ರಾಜ್ಯಪಾಲ ಎಂ.ಎಂ. ಚಂಗಪ್ಪ ಉದ್ಘಾಟಿಸಿದರು. ಈ ಸಮಾರಂಭವನ್ನು ಶಾಲಾ ಅಧ್ಯಕ್ಷ ಮುಕ್ಕಾಟೀರ ಸುನೀಲ್ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮೊದಲಿಗೆ ಶಾಲಾ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಹಾಗೂ ಯೋಗ ಗುರು ಪಿ.ಎ. ಲಕ್ಷ್ಮಿ ನಾರಾಯಣ ಯೋಗಾಸನ ಪ್ರದರ್ಶನ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಸಂಸ್ಥೆಯ ರಾಜ್ಯಪಾಲ ಎಂ.ಎಂ. ಚಂಗಪ್ಪ ಮಾತನಾಡಿ, ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಗದಿಂದ ಮಾನಸಿಕ ಸಮತೋಲನ ಉತ್ತಮ ಆರೋಗ್ಯಕ್ಕೆ ತುಂಬಾ ಉಪಕಾರಿ ಎಂದರು. ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ಮಾತನಾಡಿ, ನಮ್ಮ ಶಾಲೆಗೆ ಎಂ.ಎಂ. ಚಂಗಪ್ಪ ಸೇರಿ 3ನೇ ರಾಜ್ಯಪಾಲರು ಭೇಟಿ ನೀಡುತ್ತಿರುವ ಬಗ್ಗೆ ವಿವರಿಸಿದರು. ರೋಟರಿ ಸಂಸ್ಥೆಯಿಂದ ಶಾಲೆಗೆ ಬಿಸಿಯೂಟಕ್ಕೆ ಸಹಾಯಧನ ನೀಡಿದ ಬಗ್ಗೆ ತಿಳಿಸಿಕೊಟ್ಟರು. ಈ ಶಾಲೆಯಲ್ಲಿ 1974 ರಿಂದಲೇ ಬಿಸಿಯೂಟದ ಕಾರ್ಯಕ್ರಮ ಮತ್ತು ಯೋಗ ತರಬೇತಿ ನೀಡುತ್ತಿರುವ ಬಗ್ಗೆ ತಿಳಿಸಿ ಈ ಕಾರ್ಯಕ್ರಮವನ್ನು ಡಾ. ಮುಕ್ಕಾಟೀರ ಎಂ. ಚಂಗಪ್ಪ ಅಂದಿನ ಕಾಲದಲ್ಲಿಯೇ ಪ್ರಾರಂಭಿಸಿದ್ದನ್ನು ಸ್ಮರಿಸಿದರು.

ರೋಟರಿ ರಾಜ್ಯಪಾಲರು ಶಾಲೆಗೆ ತಮ್ಮ ಸಂಸ್ಥೆ ವತಿಯಿಂದ ರೂ. ಇಪ್ಪತ್ತೈದು ಸಾವಿರಗಳನ್ನು ಹಾಗೂ ವೈಯಕ್ತಿಕವಾಗಿ ರೂ. ಐದು ಸಾವಿರ ಮತ್ತು ಉಪ ರಾಜ್ಯಪಾಲ ಮಹೇಶ್ ನೆಲವಾಡಿ ವೈಯಕ್ತಿಕವಾಗಿ ರೂ. ಐದು ಸಾವಿರ ಧನಸಹಾಯವಾಗಿ ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಸ್ವಾಗತದೊಂದಿಗೆ, ರೋಟರಿ ಸಂಸ್ಥೆಯ ಅಧ್ಯಕ್ಷ ಶಾಂತರಾಮ್ ಕಾರಂತ್, ರೋಟರಿ ಸಂಸ್ಥೆಯ ಸದಸ್ಯರು ಹಾಗೂ ಪದಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಹ ಶಿಕ್ಷಕಿ ವೈ. ಪ್ರಮೀಳಕುಮಾರಿ ನಿರೂಪಿಸಿ, ಸಹ ಶಿಕ್ಷಕಿ ಎ.ಸಿ. ಸುನೀತ ವಂದಿಸಿದರು.