*ನಾಪೋಕ್ಲು, ಸೆ. 14: ಸಮೀಪದ ನೆಲಜಿ ಗ್ರಾಮದ ಕೃಷಿ ಪತ್ತಿನ ಸಹಕಾರವನ್ನು ವಿಭಜಿಸಿ ಅಯ್ಯಂಗೇರಿ ಗ್ರಾಮದಲ್ಲಿ ಸಂಘದ ಶಾಖೆಯನ್ನು ತೆರೆಯಲು ಉದ್ದೇಶಿಸಿರುವದನ್ನು ಬಲ್ಲಮಾವಟಿ, ಪೇರೂರು, ಹಾಗೂ ದೊಡ್ಡಪುಲಿಕೋಟು ಗ್ರಾಮಸ್ಥರು ವಿರೋಧಿಸಿದರು. ಈ ಕುರಿತು ಬಲ್ಲಮಾವಟಿ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಂಡ ಗ್ರಾಮಸ್ಥರು ನೆಲಜಿ ವ್ಯವಸಾಯ ಸಹಕಾರ ಸಂಘ ಪ್ರಾರಂಭವಾ ದಂದಿನಿಂದ ಸಂಘದ ಸದಸ್ಯರು ಆ ಸಂಸ್ಥೆಯಲ್ಲಿ ಮುಂದುವರಿದಿದ್ದು ಇದೀಗ ಅಯ್ಯಂಗೇರಿಯಲ್ಲಿ ನೂತನ ವ್ಯವಸಾಯ ಸಹಕಾರ ಸಂಘವನ್ನು ರಚಿಸಲಿರುವ ಕುರಿತು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್‍ಗೆ ಮನವಿ ಪತ್ರ ಸಲ್ಲಿಸಿದರು. ಯಾವದೇ ಕಾರಣಕ್ಕೂ ಪೇರೂರು ಹಾಗೂ ದೊಡ್ಡಪುಲಿಕೋಟು ಗ್ರಾಮಗಳನ್ನು ಅಯ್ಯಂಗೇರಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ನೆಲಜಿ ಕೃಷಿ ಪತ್ತಿನ ಸಹಕಾರ ಸಂಘವನ್ನು ವಿಭಜಿಸುವದಿದ್ದಲ್ಲಿ ಬಲ್ಲಮಾವಟಿ ಗ್ರಾಮದ ಧವಸಭಂಡಾರದ ಸುಸಜ್ಜಿತ ಕಟ್ಟಡದಲ್ಲಿ ಪೇರೂರು, ಬಲ್ಲಮಾವಟಿ, ದೊಡ್ಡಪುಲಿಕೋಟು ಗ್ರಾಮಸ್ಥರನ್ನು ಸೇರಿಸಿ ನೂತನ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಯಿತು. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿದರು. ವೀರಾಜಪೇಟೆ ಜೇನುಮೇಣ ಸಹಕಾರ ಸಂಘದ ಉಪಾಧ್ಯಕ್ಷ ಎನ್.ಪಿ. ಚಿಂಗಪ್ಪ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೆಶಕರಾದ ಟಿ.ಬಿ. ಪೊನ್ನಪ್ಪ, ಎನ್.ಕೆ. ಸುಬ್ಬಯ್ಯ, ಬಲ್ಲಮಾವಟಿ ಪೇರೂರು ಹಾಗೂ ದೊಡ್ಡಪುಲಿಕೋಟು ಗ್ರಾಮದ ಧವಸ ಭಂಡಾರದ ಅಧ್ಯಕ್ಷರು, ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.