ಮಡಿಕೇರಿ, ಸೆ. 15: ಒಂದು ಸರ್ಕಾರವನ್ನು ಕಟ್ಟುವ ಅಥವಾ ಬೀಳಿಸುವ ಅಮೂಲ್ಯ ಅಧಿಕಾರ ಮತದಾರನ ಮೇಲಿದ್ದು, ಅದನ್ನು ವಿವೇಚನೆಯಿಂದ ಬಳಸುವಂತೆ ಮಾಜಿ ಸಚಿವ ಬಿ.ಎ. ಜೀವಿಜಯ ಸಲಹೆ ನೀಡಿದರು. ನಂಜರಾಯಪಟ್ಟಣದ ಮೀನುಕೊಲ್ಲಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪಂಚಾಯಿತಿ ಮಟ್ಟದ ಸಮಿತಿ ರಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ತವ್ಯ ಪ್ರಜ್ಞೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರನ ಮೇಲಿರುತ್ತದೆ. ಈ ದಿಸೆಯಲ್ಲಿ ಮತದಾರನಿಗೆ ಸ್ಪಷ್ಟ ಮಾರ್ಗದರ್ಶನ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮಪಂಚಾಯಿತಿ ಮಟ್ಟದ ಸಮಿತಿಗಳು ಮಾಡಬೇಕು. ಚುನಾವಣೆ ಹತ್ತಿರ ಬಂದಾಗ ಮನೆ ಮನೆಗಳಿಗೆ ತೆರಳುವ ಬದಲು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು. ಚುನಾವಣೆ ವೇಳೆಯಲ್ಲಿ ಗಲಾಟೆಗಳು ಸಾಮಾನ್ಯ. ಆದರೆ ಕೊಡಗಿನಲ್ಲಿ ಬೇರೆಯದ್ದೇ ರೀತಿಯಲ್ಲಿ ಗಲಾಟೆಗಳು ಹುಟ್ಟಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಕೇಂದ್ರದ ಎನ್‍ಡಿಎ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಮೇಲೆ ಜನಸಾಮಾನ್ಯರು ನಂಬಿಕೆ ಕಳೆದುಕೊಂಡಿದ್ದಾರೆ. ಕೇವಲ 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮಾಡಿದ್ದ ಕೆಲಸ ಸಾರ್ವಜನಿಕರ ಮನಸ್ಸಿನಲ್ಲಿ ಉಳಿದುಕೊಂಡಿದ್ದು, ಜೆಡಿಎಸ್ ಕಡೆಗೆ ಒಲವಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಹೆಚ್.ಆರ್. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿರಾಜಪೇಟೆ ಕ್ಷೇತ್ರದ ಅಧ್ಯಕ್ಷ ಮತೀನ್, ಸೋಮವಾರಪೇಟೆ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಾಜೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಇದ್ದರು.

ರಂಗಸಮುದ್ರ ಬೂತ್ ಜೆಡಿಎಸ್ ಅಧ್ಯಕ್ಷರನ್ನಾಗಿ ಪರ್ಲಕೋಟಿ ಅಶೋಕ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉಂಬು, ಪ್ರಧಾನ ಕಾರ್ಯದರ್ಶಿಯಾಗಿ ಕರ್ಣೆಯನ ಸಂದೀಪ್, ಯುವ ಘಟಕದ ಅಧ್ಯಕ್ಷರಾಗಿ ತಳೂರು ಚೇತನ್ ಆಯ್ಕೆಯಾದರು. ನಂಜರಾಯಪಟ್ಟಣ ಬೂತ್‍ನ ಅಧ್ಯಕ್ಷರಾಗಿ ಮ್ಯಾಥ್ಯೂ ಹಾಗೂ ಉಪಾಧ್ಯಕ್ಷರಾಗಿ ಲತೀಫ್ ಅವರನ್ನು ಆಯ್ಕೆ ಮಾಡಲಾಯಿತು.