ಗೋಣಿಕೊಪ್ಪಲು,ಸೆ.15: ಕಾವೇರಿ ಜಲಾನಯನ ಪ್ರದೇಶದಲ್ಲಿ ಅಭಿವೃದ್ಧಿಯ ನೆಪದಲ್ಲಿ ಒಂದು ಲಕ್ಷಕ್ಕೂ ಅಧಿಕ ಮರ ಕಡಿತಲೆ ಹಿನ್ನೆಲೆ ಇಂದು ಎಲ್ಲೆಡೆ ಮಳೆಯ ಅಭಾವ ತಲೆದೋರಿದೆ. ಇದೀಗ ಮತ್ತೆ ರೈಲ್ವೇ ಸಂಪರ್ಕ, ರಸ್ತೆ ಅಗಲೀಕರಣ ನೆಪದಲ್ಲಿ ಮತ್ತಷ್ಟು ಮರಗಳ ಮಾರಣಹೋಮಕ್ಕೆ ಸಿದ್ಧತೆ ನಡೆದಿದೆ. ದೇಶದ ಸಂಪತ್ತನ್ನು ಉಳಿಸುವದು ನಮ್ಮೆಲ್ಲರ ಜವಾಬ್ದಾರಿ. ಕಾವೇರಿ ಇಂದು ಕೊಳಕಾಗುತ್ತಿದ್ದಾಳಾ ಎಂಬ ಭಯ ಕಾಡುತ್ತಿದೆ. ಮೂರ್ತಿ ಪೂಜೆಗಿಂತಲೂ ಕಾವೇರಿ ನದಿಯನ್ನು ಶುಚಿತ್ವಗೊಳಿಸುವದು ನಿಜವಾದ ಪೂಜೆಯಾಗಿದ್ದು, ನಾವೆಲ್ಲರೂ ಹೊಣೆ ಹೊರಬೇಕಾಗಿದೆ ಎಂದು ಕರ್ನಾಟಕ ಯುವ ಬ್ರಿಗೇಡ್‍ನ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.

ಗೋಣಿಕೊಪ್ಪಲು ಕಾವೇರಿ ಕಾಲೇಜು ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ‘ಸದೃಢ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ’ ವಿಷಯವಾಗಿ ಮಾತನಾಡುತ್ತಾ ಕಾವೇರಿ ಕಲುಷಿತಗೊಳ್ಳುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.

ಕುಶಾಲನಗರ ಗಡಿಭಾಗ ಸೇತುವೆ ಸಮೀಪ ಶ್ರೀಮಂತ ವ್ಯಕ್ತಿಗಳೇ ಕಾರಿನಲ್ಲಿ ಬಂದು ಕಾವೇರಿ ನದಿಗೆ ತ್ಯಾಜ್ಯ ಎಸೆಯುತ್ತಿರುವದು ಅಕ್ಷಮ್ಯ, ಒಂದೊಮ್ಮೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾಡು ಸಂಪೂರ್ಣ ನಾಶವಾದಲ್ಲಿ ಕಾವೇರಿ ನದಿಯು ಬತ್ತಿ ಹೋಗಿ ಮುಂದೆ ನೀರಿಗಾಗಿ ತಮಿಳುನಾಡು-ಕರ್ನಾಟಕ ಜಗಳವೇ ಇರುವದಿಲ್ಲ ಎಂದು ಕಳವಳ ಹೊರಗೆಡವಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡನೆಡುವ ಸಲುವಾಗಿ ತಮ್ಮ ತಂಡ ಕುಶಾಲನಗರಕ್ಕೆ ಬಂದಾಗ ಸುಮಾರು 6 ಗಂಟೆ ಕಾಲ ನದಿಪಾತ್ರವನ್ನು ಸ್ವಚ್ಛ ಮಾಡಬೇಕಾ ಯಿತು. ಮೂರ್ತಿ ಪೂಜೆಗಿಂತಲೂ ಶುಚಿತ್ವ ನಿಜವಾದ ಪೂಜೆ. ನವಭಾರತ ನಿರ್ಮಾಣದಲ್ಲಿ ಯುವಜನಾಂಗದ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಬಾಲಗಂಗಾಧರನಾಥ ಸ್ವದೇಶಿ ಚಳುವಳಿಗೆ ಇಂದು 100 ವರ್ಷ, ವಿವೇಕಾನಂದರ ಚಿಕಾಗೋ ಭಾಷಣಕ್ಕೆ ಇಂದು 125 ವರ್ಷ ತುಂಬಿದೆ, ಐರ್ಲೆಂಡ್‍ನಿಂದ ವಿವೇಕಾನಂದರ ಅನುಯಾಯಿಯಾಗಿ ಬಂದು ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿದ ನಿವೇದಿತಾ ಹೋರಾಟಕ್ಕೂ ಇಂದು 150 ವರ್ಷ. ಗೋಣಿಕೊಪ್ಪಲು ಕಾವೇರಿ ಕಾಲೇಜು ಇಂದು ಸುವರ್ಣ ಸಂಭ್ರಮ ಆಚರಿಸುತ್ತಿರಬೇಕಾದರೆ ಹಲವಾರು ಕೈಗಳ ಪರಿಶ್ರಮವಿದೆ ಎಂದು ವ್ಯಾಖ್ಯಾನಿಸಿದ ಚಕ್ರವರ್ತಿ ಸೂಲಿಬೆಲೆ ಭಗವಂತನ ಶಕ್ತಿಯಿದ್ದಲ್ಲಿ ಮಾತ್ರಾ ಸಂಸ್ಥೆಯೊಂದು ದೀರ್ಘಕಾಲ ನಡೆಯಲು ಸಾಧ್ಯ ಎಂದರು.

ಭಾರತ ಸಂಸ್ಥಾನವೂ ಪರ್ಷಿಯಾ ದೇಶದವರೆಗೂ ವಿಸ್ತರಿಸಿತ್ತು. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಭಾರತವೇ ಆಗಿದ್ದು. ಸ್ವಾತಂತ್ರ್ಯನಂತರ ವಿಸ್ತೀರ್ಣ ಕಿರಿದಾಗತೊಡಗಿತು. ಹೀಗಿದ್ದೂ ಭಾರತದ ಶ್ರೀಮಂತ ಸಂಸ್ಕೃತಿ, ಧರ್ಮ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ ಎಂದು ಹೇಳಿದರು.

ಗ್ರೀಕ್ ಸಂಸ್ಕೃತಿ ಇಂದು ನಾಶವಾಗಿದೆ. ಆದರೆ, ಭಾರತದಲ್ಲಿ ಪ್ರತೀ 100 ಕಿ.ಮೀ.ಗೆ ಒಂದು ಭಾಷೆ ಇದೆ. ಸುಮಾರು 700ಕ್ಕೂ ಅಧಿಕ ಭಾಷೆ, ವೈವಿಧ್ಯಮಯ ಸಂಸ್ಕೃತಿ ನಮ್ಮದು ಎಂದು ಹೇಳಿದ ಅವರು ಇಲ್ಲಿ ಹಿಂದೂ, ಮುಸ್ಲೀಂ, ಕ್ರೈಸ್ತ ಧರ್ಮ ಎಲ್ಲರನ್ನೂ ಬೆಸೆದುಕೊಂಡಿದೆ ಎಂದರು.

ಭಾರತದ ಪುರಾತನ ಕಲೆ ಯೋಗವನ್ನು 166 ರಾಷ್ಟ್ರಗಳು ಅಳವಡಿಸಿಕೊಂಡಿದೆ. ಯೋಗ, ವಿಜ್ಞಾನ ಹಾಗೂ ಅಯುರ್ವೇದದ ಮೂಲಬೇರು ಭಾರತ ಎಂದು ನುಡಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಆಶೀರ್ವಚನ ಬೋಧಿಸಿದ ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಮುಖ್ಯಸ್ಥರಾದ ಸ್ವಾಮಿ ಬೋಧ ಸ್ವರೂಪಾನಂದಜಿ ವಿವೇಕಾನಂದರ ಅನುಯಾಯಿಗಳು ಭಾರತದಾತ್ಯಂತ ಇದ್ದಾರೆ. ಯುವಜನಾಂಗದಲ್ಲಿ ಅರಿವು ಮೂಡಿಸುವ. ಎಚ್ಚರಿಸುವ ಕೆಲಸ ನಡೆಯುತ್ತಿದೆ. ಸಹೋದರಿ ನಿವೇದಿತಾ ಭಾರತೀಯರ ಮನೆಮನೆಗೆ ತೆರಳಿ ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಕರೆ ನೀಡುತ್ತಿದ್ದರು. ಇಂದು ದೇಶದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಅಧಿಕಗೊಳ್ಳಲು ಅಂದಿನ ಪ್ರಯತ್ನವೇ ಕಾರಣವಾಗಿದೆ. ಇತಿಹಾಸ ಸೃಷ್ಟಿಗೆ ಕಾರಣರಾದ ದೇಶಭಕ್ತರ ಸ್ಮರಣೆ ನಮಗೆ ಅಗತ್ಯ. ಭಾರತೀಯರ ಪ್ರತಿ ಮನೆ ಮನೆಯಲ್ಲಿಯೂ ವೇದಾಂತ ಪರಿಕಲ್ಪನೆಗೆ ಒತ್ತು ನೀಡಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾನಿ ಚಿರಿಯಪಂಡ ಕೆ.ಉತ್ತಪ್ಪ ಕಾವೇರಿ ಕಾಲೇಜು ಕಳೆದ 50 ವರ್ಷಗಳಲ್ಲಿ ಕಂಡ ಏಳು-ಬೀಳುಗಳ ಬಗ್ಗೆ, ಆರಂಭದ ದಿನಗಳ ಸಂಕಷ್ಟ ಕಾಲದ ಬಗ್ಗೆ ವಿವರಿಸಿದರು. ಪ್ರಾಂಶುಪಾಲ ಪೆÇ್ರ.ಪಿ.ಎ.ಪೂವಣ್ಣ ಅವರು ಸ್ವಾಗತ, ಕುಮಾರಿ ವಿನಿತಾ, ಆಶ್ರಿತಾ ವೃಂದ ಪ್ರಾರ್ಥನೆ, ಎಸ್.ಎಂ.ರಜನಿ, ಎಂ.ಸಿ.ಸೀಮಾ ಹಾಗೂ ಬೆನೆಡಿಕ್ಟ್ ಸಲ್ಡಾನ ನಿರೂಪಣೆ, ಉಪಪ್ರಾಂಶುಪಾಲೆ ಎಂ.ಕೆ.ಪದ್ಮಾ ವಂದನಾರ್ಪಣೆ ಮಾಡಿದರು.