ಕುಶಾಲನಗರ, ಸೆ. 15: ಸಮಾಜಮುಖಿ ಕಾರ್ಯಚಟುವಟಿಕೆ ಗಳ ಮೂಲಕ ರೋಟರಿ ಸಂಸ್ಥೆ ವಿಶ್ವದ ಶ್ರೇಷ್ಠ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ರೋಟರಿ ಕುಶಾಲನಗರ 3181 ರ ಜಿಲ್ಲಾ ರಾಜ್ಯಪಾಲ ಎಂ.ಎಂ. ಸುರೇಶ್ ಚಂಗಪ್ಪ ಹೇಳಿದರು.

ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 112 ವರ್ಷಗಳಿಂದ 216 ದೇಶಗಳಲ್ಲಿ ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಪಾರದರ್ಶಕ ವಾಗಿ ಹಮ್ಮಿಕೊಂಡು ಬರುತ್ತಿರುವ ಏಕೈಕ ಸಂಸ್ಥೆಯಾಗಿ ರೋಟರಿ ಹೊರಹೊಮ್ಮಿದೆ. ಸಂಸ್ಥೆಯ ಅತ್ಯಂತ ಮಹತ್ತರ ಯೋಜನೆಯಾದ ಪಲ್ಸ್ ಪೋಲಿಯೋ ಯೋಜನೆ ಬಹುತೇಕ ಯಶಸ್ಸು ಕಂಡಿದೆ ಎಂದರು.

ವಿಶ್ವದಲ್ಲಿ ಶೇ. 99 ರಷ್ಟು ಪೋಲಿಯೋ ನಿಮೂರ್ಲನೆ ಮಾಡುವಲ್ಲಿ ಶ್ರಮಿಸಿರುವ ಸಂಸ್ಥೆ ಮುಂದಿನ ಎರಡು ವರ್ಷಗಳಲ್ಲಿ ಪೋಲಿಯೋ ಪಿಡುಗು ಸಂಪೂರ್ಣ ವಾಗಿ ನಿಮೂರ್ಲನೆ ಮಾಡಲಿದೆ ಎಂದರು. ಪ್ರಸಕ್ತ ಪರಿಸರ ಉಳಿವಿಗೆ ಲಕ್ಷವೃಕ್ಷ ಯೋಜನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ವಲಯ ವ್ಯಾಪ್ತಿಯಲ್ಲಿ 1 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿರುವ ಸಂಸ್ಥೆ ಈಗಾಗಲೆ ಅಂದಾಜು 70 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ ಎಂದು ಮಾಹಿತಿ ಒದಗಿಸಿದರು.

ವಿದ್ಯುತ್ ಸಂಪರ್ಕದಿಂದ ವಂಚಿತಗೊಂಡಿರುವ 3 ಸಾವಿರ ಮನೆಗಳಿಗೆ ನಿತ್ಯಜ್ಯೋತಿ ಯೋಜನೆ ಯಡಿ ಸೋಲಾರ್ ದೀಪಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಪ್ರಾಥಮಿಕ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ 200 ಮನೆಗಳನ್ನು ಗುರುತಿಸಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಯೋಜನೆಗೆ ಚಾಲನೆ ನೀಡಲಾಗುವದು ಎಂದರು.

ಇದೇ ರೀತಿಯಲ್ಲಿ ಶಾಲಾ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಹಲವು ರೀತಿಯ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು, ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಕಾರ್ಯಾಗಾರಗಳು, ಸ್ವಚ್ಛತಾ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.

ಸಂಸ್ಥೆ ತನ್ನ ಸದಸ್ಯರ ವಾರ್ಷಿಕ ಚಂದಾ ಹಣದಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಈ ಉದ್ದೇಶಗಳಿಗೆ ಸರಕಾರವಾಗಲಿ ಅಥವಾ ವಿದೇಶದಿಂದ ನೀಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಸಹಾಯಕ ರಾಜ್ಯಪಾಲ ಮಹೇಶ್ ಕುಮಾರ್ ನಾಲ್ವಡೆ, ರೋಟರಿ ಕುಶಾಲನಗರ ಅಧ್ಯಕ್ಷ ಎನ್.ಜಿ. ಪ್ರಕಾಶ್, ಕಾರ್ಯದರ್ಶಿ ಸಿ.ಬಿ. ಹರೀಶ್, ಮಾಜಿ ಅಧ್ಯಕ್ಷರುಗಳಾದ ಕ್ರಿಜ್ವಲ್ ಕೋಟ್ಸ್, ನವೀನ್, ಪ್ರಮುಖರಾದ ಎಸ್.ಕೆ. ಸತೀಶ್, ಡಾ. ಹರಿ ಎ. ಶೆಟ್ಟಿ ಇದ್ದರು.