ಕುಶಾಲನಗರ, ಸೆ. 15: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17 ರ ಸಾಲಿನಲ್ಲಿ ರೂ. 25.03 ಲಕ್ಷಗಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಜಿ.ಎಂ. ಮಣಿಕುಮಾರ್ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 9 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 1950 ಸದಸ್ಯರುಗಳನ್ನು ಹೊಂದಿರುವ ಸಂಘ ರೂ. 1 ಕೋಟಿ 41 ಲಕ್ಷ 47 ಸಾವಿರ ರೂ.ಗಳ ಪಾಲು ಬಂಡವಾಳ ಹೊಂದಿದೆ. 2016-17ರ ಸಾಲಿಗೆ ರೂ. 1 ಕೋಟಿ 19 ಲಕ್ಷದ 51 ಸಾವಿರ ವಹಿವಾಟು ನಡೆಸಿದೆ ಎಂದು ಮಾಹಿತಿ ನೀಡಿದರು.

ರೂ. 77 ಲಕ್ಷದ 17 ಸಾವಿರ ಕ್ಷೇಮನಿಧಿ ಹಾಗೂ ರೂ. 17 ಕೋಟಿ 28 ಲಕ್ಷದ 56 ಸಾವಿರ ಠೇವಣಿ ಹೊಂದಿದೆ ಎಂದಿದ್ದಾರೆ. ಸಂಘದ ಸದಸ್ಯರಿಗೆ ರೂ. 8 ಕೋಟಿ 58 ಲಕ್ಷದ 46 ಸಾವಿರ ಸಾಲ ಹಾಗೂ ಮದ್ಯಾವಧಿ ಸಾಲ, ಇತರೆ ಸಾಲ ಸೇರಿ ರೂ. 7 ಕೋಟಿ 52 ಸಾವಿರ ವಿತರಿಸಲಾಗಿದೆ ಎಂದರು.

ಸಂಘದ ಸ್ವಂತ ಬಂಡವಾಳದಿಂದ ಸಾಲ ವಿತರಿಸಲಾಗುತ್ತಿದ್ದು ಈ ಸಾಲಿನಲ್ಲಿ ಸದಸ್ಯರಿಂದ ಶೇ. 99.99 ರಷ್ಟು ಸಾಲ ವಸೂಲಿಯಾಗಿದೆ. ಪ್ರಸಕ್ತ ಸಾಲಿನಿಂದ ಸದಸ್ಯರಿಗೆ ಅನುಕೂಲವಾಗುವಂತೆ ಗೃಹ ಸಾಲ ನೀಡಲಾಗುತ್ತಿದೆ ಎಂದರು.

ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮಗಳಲ್ಲಿ ಸಂಘ ದಿನಸಿ ಶಾಖೆಗಳನ್ನು ಹೊಂದಿದ್ದು ಆ ಮೂಲಕ ರಸಗೊಬ್ಬರ, ಕ್ರಿಮಿನಾಶಕ, ಗ್ರಾಹಕರಿಗೆ ಬೇಕಾದ ವಸ್ತುಗಳು, ಅಡುಗೆ ಅನಿಲ ಹಾಗೂ ಮದ್ದುಗುಂಡುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ರೂ 6.5 ಕೋಟಿ ವ್ಯಾಪಾರ ವಹಿವಾಟು ನಡೆಸಿ ರೂ. 24 ಲಕ್ಷದ 31 ಸಾವಿರ ಲಾಭಗಳಿಸಿದೆ. 3 ಶಾಖೆಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಯುತ್ತಿದ್ದು ವಾಲ್ನೂರು ಶಾಖೆಯಲ್ಲಿ ಸಹಕಾರ ಸಭಾಂಗಣದ ಮೂಲಕ ರಿಯಾಯಿತಿ ದರದಲ್ಲಿ ಸದಸ್ಯರ ಕುಟುಂಬಗಳಿಗೆ ಮದುವೆ ಇನ್ನಿತರೆ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲಾಗುತ್ತಿದೆ. ರೈತರಿಗೆ ಸಹಾಯವಾಗುವಂತೆ ಎರಡು ಟ್ರಾಕ್ಟರ್, ಒಂದು ಮಿನಿ ಲಾರಿಗಳನ್ನು ಹೊಂದಿದ್ದು ಕೃಷಿ ಕೆಲಸಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ನೂರಾರು ಸ್ವಸಹಾಯ ಸಂಘಗಳ ಮೂಲಕ ರೂ. 1 ಕೋಟಿ 48 ಲಕ್ಷದ 21 ಸಾವಿರ ಠೇವಣಿ ಸಂಗ್ರಹಿಸಲಾಗಿದೆ. ಈ ಆಧಾರದಲ್ಲಿ ಬ್ಯಾಂಕಿನಿಂದ ರೂ 74 ಲಕ್ಷದ 31 ಸಾವಿರ ಸಾಲ ನೀಡಲಾಗಿದೆ ಎಂದು ಮಣಿಕುಮಾರ್ ತಿಳಿಸಿದರು.

ಪ್ರತಿ ವರ್ಷವೂ ಸಂಘದ ವ್ಯಾಪ್ತಿಯ ಹತ್ತನೇ ಮತ್ತು 7ನೇ ತರಗತಿಗಳಲ್ಲಿ ಹೆಚ್ಚು ಅಂಕಗಳಿಸಿದ 3 ವಿದ್ಯಾರ್ಥಿಗಳು ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆರು ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ವಿವರ ನೀಡಿದರು.

ತಾ. 24 ಮಹಾಸಭೆ

2016-17ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ 24 ರಂದು ನಂಜರಾಯಪಟ್ಟಣ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ತಿಳಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ಧನಂಜಯ, ಸಂಘದಿಂದ 723 ಸದಸ್ಯರನ್ನು ಯಶಸ್ವಿನಿ ಯೋಜನೆಯಡಿ ನೋಂದಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಡಿ.ಎಲ್. ಮಹೇಶ್ ಚಂದ್ರ, ಪಿ.ಬಿ. ಅಶೋಕ್, ಜೆ.ಪಿ. ರಾಜು, ಎ.ಎಂ. ಲೋಕನಾಥ್ ಇದ್ದರು.