ಮಡಿಕೇರಿ, ಸೆ. 14: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2017-18ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ನೇರಸಾಲ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.

ಅರಿವು ಅವಧಿ ನೇರಸಾಲ ಯೋಜನೆ (ವಿದೇಶದಲ್ಲಿ ವ್ಯಾಸಂಗ): ಈ ಯೋಜನೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳಲು ಕೋರ್ಸ್ ಮುಗಿಯುವ ಪೂರ್ಣ ಅವಧಿಗೆ ಗರಿಷ್ಠ ರೂ. 10 ಲಕ್ಷಗಳವರೆಗೆ ಸಾಲದ ನೆರವನ್ನು ಭದ್ರತಾ ದಾಖಲಾತಿಗಳನ್ನು ನಿಗಮಕ್ಕೆ ಅಡಮಾನ ಮಾಡಿ ಸಾಲವನ್ನು ಕಲ್ಪಿಸಲಾಗುತ್ತಿದೆ.

ವಿದ್ಯಾರ್ಥಿಗಳು ನಿಗಮದಿಂದ ಸಾಲ ಪಡೆದು ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಸಾಲವನ್ನು ನಿಗಮಕ್ಕೆ ಶೇ. 3 ರಿಂದ 8 ವರೆಗೆ ಬಡ್ಡಿ ದರದಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ಜಿಲ್ಲೆಗೆ ಒಟ್ಟು ಭೌತಿಕ / ಆರ್ಥಿಕ ರೂ. 4 ಗುರಿ ನಿಗದಿಪಡಿಸಿದೆ.

ನೇರಸಾಲ ಯೋಜನೆ: ಈ ಯೋಜನೆಯಡಿ ರಾಷ್ಟ್ರೀಯ ಅಲ್ಪಸಂಖ್ಯಾತರ ಹಾಗೂ ಹಣಕಾಸು ಅಭಿವೃದ್ಧಿ ನಿಗಮ, ನವದೆಹಲಿ ಇವರ ಸಹಯೋಗದೊಂದಿಗೆ ರೂ. 5 ಲಕ್ಷಗಳಿಂದ, ಗರಿಷ್ಠ 10 ಲಕ್ಷದವರೆಗೆ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ನೇರವಾಗಿ ಹಣಕಾಸಿನ ನೆರವನ್ನು ಅಲ್ಪಸಂಖ್ಯಾತರ ಜನರಿಗೆ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಶೇ. 7 ರ ಬಡ್ಡಿ ದರವನ್ನು ವಿಧಿಸಲಾಗುವದು. ಈ ಯೋಜನೆಯ ಲಾಭ ಪಡೆಯಲು ಫಲಾಪೇಕ್ಷಿಗಳು ತಮ್ಮ ಸ್ಥಿರಾಸ್ತಿಯನ್ನು ನಿಗಮಕ್ಕೆ ಅಡಮಾನ ಮಾಡಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ / ಆರ್ಥಿಕ ಗುರಿ ರೂ. 10 ಲಕ್ಷಗಳಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ರಾಮಮಂದಿರದ ಹಿಂಭಾಗ, ಹೊಟೇಲ್ ಹಿಲ್-ವ್ಯೂ ಹತ್ತಿರ, ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. -571201 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಅರ್ಜಿಗಳನ್ನು ಪಡೆಯಬಹುದಾಗಿದೆ. ಅರ್ಜಿ ಪಡೆದುಕೊಳ್ಳಲು ತಾ. 30 ಕಡೆಯ ದಿವಸವಾಗಿರುತ್ತದೆ. ಕಚೇರಿ ದೂರವಾಣಿ ಸಂಖ್ಯೆ: 08272-220449 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್. ನಾಗೇಂದ್ರ ತಿಳಿಸಿದ್ದಾರೆ.

ವಾಜಪೇಯಿ ನಗರ ಯೋಜನೆಗೆ

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ವತಿಯಿಂದ ವಸತಿ ರಹಿತ ಹಾಗೂ ಖಾಲಿ ನಿವೇಶನ ಹೊಂದಿರುವ ಫಲಾನುಭವಿಗಳಿಗೆ 2017-18ನೇ ಸಾಲಿಗೆ “ವಾಜಪೇಯಿ ನಗರ ಯೋಜನೆ”ಯಲ್ಲಿ ಅಲ್ಪಸಂಖ್ಯಾತರಿಗೆ ಮತ್ತು ಸಾಮಾನ್ಯ ವರ್ಗದವರಿಗೆ ರೂ. 2.70 ಲಕ್ಷದಂತೆ ಮನೆ ನಿರ್ಮಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅಗತ್ಯ ದಾಖಲೆ ಪತ್ರ ಇರುವ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಅರ್ಹ ಫಲಾನುಭವಿಗಳು ಅಕ್ಟೋಬರ್ 31 ರೊಳಗೆ ನಗರಸಭೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಕಚೇರಿಯ ಕೆಲಸದ ವೇಳೆಯಲ್ಲಿ ವಸತಿ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರು ಕೋರಿದ್ದಾರೆ.