ಕುಶಾಲನಗರ, ಸೆ. 15: ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಯಡವನಾಡು ಅರಣ್ಯ ಪ್ರದೇಶದ ಹಾಡಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಸೋಮವಾರಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅರಣ್ಯ ಹಕ್ಕು ಕಾನೂನಿನಡಿ ಅರಣ್ಯವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಸೂಚಿಸಿದ್ದರು. ಆದರೆ ಐಟಿಡಿಪಿ ಇಲಾಖೆ, ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇದುವರೆಗೆ ಯಾವದೇ ರೀತಿಯ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸರ್ವೆ ನಡೆಸಿ ವರದಿ ನೀಡುವಂತೆ ಕೊಡಗು ಜಿಲ್ಲಾಡಳಿತದ ಸೂಚನೆಗೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವದೇ ಮಾನ್ಯತೆ ನೀಡದೆ ಅರಣ್ಯ ಇಲಾಖೆಯೊಂದಿಗೆ ಸೇರಿ ಗಿರಿಜನರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಚಂದ್ರ ಆರೋಪಿಸಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ, ಸಮಾಜ ಕಲ್ಯಾಣ ಇಲಾಖೆಗೆ ತಾಲೂಕಿನಲ್ಲಿ ಎಷ್ಟು ಹಾಡಿಗಳಿವೆ ಎಂಬದರ ಬಗ್ಗೆ ಮಾಹಿತಿಯ ಕೊರತೆಯಿದೆ. ಪ್ರತಿ ಬಾರಿಯೂ ಕೂಡ ಸಭೆ ನಡೆಸದೆ ಇಲ್ಲಸಲ್ಲದ ನೆಪ ಹೇಳಿ ನುಣಚಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿ ಹಾಡಿಯ ನಿವಾಸಿಗಳು ದಂಗೆ ಏಳುವ ನಿರ್ಧಾರ ಕೈಗೊಂಡಿದ್ದಾರೆ. ತಾಲೂಕು ವ್ಯಾಪ್ತಿಯ ಸಜ್ಜಳ್ಳಿ, ಬೆಂಡೆಬೆಟ್ಟ, ಯಡವನಾಡು, ಸೂಳೆಬಾವಿ, ಹುಣಸೆಪಾರೆ ಹಾಡಿ ನಿವಾಸಿಗಳು ಸಭೆ ನಡೆಸಿ ಮುಂದಿನ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ ಅವರು ತಾಲೂಕಿನ ಸುಮಾರು 20 ಸಾವಿರ ಮಂದಿ ಗಿರಿಜನರು ಮತದಾನದಿಂದ ಹಿಂದೆ ಸರಿಯಲಿದ್ದಾರೆ ಎಂದರು. ಜಿಲ್ಲಾಡಳಿತ ಕೂಡಲೆ ಎಚ್ಚೆತ್ತುಕೊಂಡು ಸಮಸ್ಯೆ ನಿವಾರಿಸಲು ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಿರುವದಾಗಿ ಅವರು ಎಚ್ಚರಿಸಿದರು. ಗೋಷ್ಠಿಯಲ್ಲಿ ಯಡವನಾಡು ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಜೆ.ಎಚ್. ರವಿ, ಹಾಡಿ ನಿವಾಸಿಗಳಾದ ಉಮೇಶ್, ದಿನೇಶ್, ಜೆ.ಎಸ್.ರವಿ, ಸತೀಶ್, ದಿನೇಶ್ ಇದ್ದರು.