ಸೋಮವಾರಪೇಟೆ, ಸೆ. 16: ಕೃಷಿ ಇಲಾಖೆ ವತಿಯಿಂದ ಐಗೂರು ಗ್ರಾ.ಪಂ. ಸದಸ್ಯ ಕೆ.ಪಿ. ದಿನೇಶ್ ಅವರ ಸಹಯೋಗದೊಂದಿಗೆ ಅವರ ಭತ್ತ ಕೃಷಿ ಭೂಮಿಯಲ್ಲಿ ಯಂತ್ರ ನಾಟಿ ಪ್ರಾತ್ಯಕ್ಷಿಕೆ ನಡೆಸಿ ಕೃಷಿಕರಿಗೆ ಮಾಹಿತಿ ನೀಡಲಾಯಿತು.

ಹೋಬಳಿ ಕೃಷಿ ಅಧಿಕಾರಿ ಕವಿತ ಯಂತ್ರ ನಾಟಿಯ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಯಂತ್ರ ನಾಟಿಯಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಲಿದ್ದು, ಭತ್ತದ ಸಸಿಮಡಿಯನ್ನು ಮನೆಯ ಕಣದಲ್ಲೇ ವೈಜ್ಞಾನಿಕವಾಗಿ ಮಾಡಿಕೊಳ್ಳಬಹುದು. ಸಸಿ ಮಡಿಗೆ 20 ದಿನ ಕಳೆದ ನಂತರ ನಾಟಿ ಮಾಡಬಹುದು. ಕೃಷಿ ಇಲಾಖೆಯಿಂದ ಯಂತ್ರನಾಟಿಗೆ ಹೆಕ್ಟೇರ್‍ವೊಂದಕ್ಕೆ 4 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಕೃಷಿ ಭಾಗ್ಯ ಯೋಜನೆಯಲ್ಲಿ ಕೆರೆ ನಿರ್ಮಿಸಲು ಸಹಾಯಧನ ನೀಡಲಾಗುತ್ತದೆ. ಕೃಷಿಕರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಪಿ. ರಾಯ್, ಚಂದ್ರಪಾಲ್, ಗೋವಿಂದ, ರಾಜೇಶ್, ಜಯಕಾಂತ್, ಮೊಗಪ್ಪ, ಕೆ.ಪಿ. ಶೋಭ ಸೇರಿದಂತೆ ಇತರರು ಭಾಗವಹಿಸಿ ಯಂತ್ರ ನಾಟಿಯ ಬಗ್ಗೆ ಮಾಹಿತಿ ಪಡೆದರು.