ಮಡಿಕೇರಿ, ಸೆ. 16: ಪ್ರಸಕ್ತ ವರ್ಷದ ಅಕ್ಟೋಬರ್ 17ರಂದು ಹಗಲು 12.33 ಗಂಟೆಗೆ ತುಲಾ ಲಗ್ನದಲ್ಲಿ ಶ್ರೀ ಕಾವೇರಿ ತೀರ್ಥೋದ್ಭವ ದೊಂದಿಗೆ ಜರುಗಲಿರುವ ತುಲಾ ಸಂಕ್ರಮಣ ಜಾತ್ರೆಗೆ ನಾಡಿನ ಜನಸ್ತೋಮದೊಂದಿಗೆ ಎಲ್ಲ ಇಲಾಖೆಗಳು ಸಹಕರಿಸುವ ಮೂಲಕ ಯಶಸ್ಸುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಕರೆ ನೀಡಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಬಗ್ಗೆ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಈ ಬಾರಿ ಹಗಲು ವೇಳೆ ಕಾವೇರಿ ತೀರ್ಥೋದ್ಭವ ನಡೆಯುವದರಿಂದ ಭಕ್ತರು ಹಾಗೂ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಲಿದ್ದು, ಎಲ್ಲ ರೀತಿಯಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಗಮನ ಹರಿಸಬೇಕೆಂದು ಸಚಿವರು ನಿರ್ದೇಶಿಸಿದರು.

ಕ್ಷೇತ್ರದಲ್ಲಿ ತೀರ್ಥ ಸ್ನಾನದೊಂದಿಗೆ ಧಾರ್ಮಿಕ ಕೈಂಕರ್ಯಗಳನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆಯೊಂದಿಗೆ ಸಂಗಮ ಕ್ಷೇತ್ರದಲ್ಲಿ ಪಿತೃ ಕಾರ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು, ಪೂಜಾ ಕೈಂಕರ್ಯಗಳ ಸುಸೂತ್ರ ನಿರ್ವಹಣಾ

(ಮೊದಲ ಪುಟದಿಂದ) ಸಲುವಾಗಿ ಧಾರ್ಮಿಕ ಇಲಾಖೆಯಿಂದ ಗಮನಹರಿಸಲು ಸಚಿವ ಸೀತಾರಾಂ ಸೂಚಿಸಿದರು.

ಅಲ್ಲದೆ ವಾಹನಗಳ ನಿಲುಗಡೆ ವ್ಯವಸ್ಥೆ, ಸಂಚಾರ ತೊಡಕು ಉಂಟಾಗದಂತೆ ಅಲ್ಲಲ್ಲಿ ಬ್ಯಾರಿಕೇಡ್‍ಗಳ ನಿರ್ಮಾಣ, ತೀರ್ಥ ಕುಂಡಿಕೆ ಬಳಿ ಜನ ಜಂಗುಳಿಯಾಗದಂತೆ ತಡೆ ಕಲ್ಪಿಸುವದು, ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆಯೂ ಸಚಿವರು ಸಲಹೆ ನೀಡಿದರು.

ಭಾಗಮಂಡಲಕ್ಕೆ ತೆರಳುವ ಮಡಿಕೇರಿ ರಸ್ತೆ, ನಾಪೋಕ್ಲು, ಕಕ್ಕಬೆ ಮಾರ್ಗವಾಗಿ ಬರುವ ರಸ್ತೆಗಳು ತೀರಾ ಹದಗೆಟ್ಟಿದ್ದು, ಪ್ರತಿ ವರ್ಷ ತುಲಾ ಸಂಕ್ರಮಣ ಜಾತ್ರೆ ವೇಳೆ ಹೊಂಡಗಳಿಗೆ ಮಣ್ಣು ಸುರಿದು ಹಣ ವ್ಯಯಿಸಲಾಗುತ್ತಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಹಾಗೂ ಇತರರು ಗಮನ ಸೆಳೆದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶಿಸಿದ ಸಚಿವರು ಜಾತ್ರೆಗೆ ಮುನ್ನ ಎಲ್ಲ ರಸ್ತೆಗಳ ಗುಂಡಿ ಮುಚ್ಚುವದರೊಂದಿಗೆ ಮಾರ್ಗ ಬದಿ ಕಾಡು ಕಡಿಸಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಗಮನಹರಿಸಲು ಸೂಚನೆ ನೀಡಿದರು.

ಜಾತ್ರೆ ಸಂದರ್ಭ ಕ್ಷೇತ್ರದಲ್ಲಿ ವಿದ್ಯುತ್ ಅಡಚಣೆಯಾಗದಂತೆ ಚೆಸ್ಕಾಂ ಅಧಿಕಾರಿಗಳು ಗಮನ ಹರಿಸುವಂತೆ ಗ್ರಾ.ಪಂ.ನಿಂದ ಸ್ವಚ್ಛತೆ ಕಡೆ ಗಮನಹರಿಸಿ ವಾಹನಗಳಿಗೆ ಪ್ರವೇಶ ಶುಲ್ಕ ವಸೂಲಿ ಮಾಡದಂತೆಯೂ ಸಚಿವ ಸೀತಾರಾಂ ಸಲಹೆ ನೀಡಿದರು. ಆರೋಗ್ಯ ಇಲಾಖೆಯಿಂದ ವೈದ್ಯ - ಸಿಬ್ಬಂದಿ ನೇಮಕ ಅಗತ್ಯವೆಂದು ನಿರ್ದೇಶಿಸಿದರು.

ರಕ್ಷಣೆಗೆ ಮನವಿ : ತುಲಾ ಸಂಕ್ರಮಣ ಪ್ರಾರಂಭದಿಂದ ಕಿರು ಸಂಕ್ರಮಣದವರೆಗೆ ಒಂದು ತಿಂಗಳು ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಪೊಲೀಸ್ ರಕ್ಷಣೆಯ ಅಗತ್ಯವಿದೆಯೆಂದು ತಕ್ಕ ಕೋಡಿ ಮೋಟಯ್ಯ ಹಾಗೂ ಏಕೀಕರಣ ರಂಗದ ಪ್ರಮೋದ್ ಮೊದಲಾದವರು ಪ್ರಸ್ತಾಪಿಸಿದರು. ಎಸ್ಪಿ ರಾಜೇಂದ್ರ ಪ್ರಸಾದ್ ಸೂಕ್ತ ವ್ಯವಸ್ಥೆಯ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಂಘ-ಸಂಸ್ಥೆಗಳ ಪ್ರಮುಖರಾದ ಪ್ರಭಾಕರ್, ರಾಜಾರೈ, ಎಂ.ಬಿ. ದೇವಯ್ಯ, ಅರ್ಚಕ ರಾಜೇಶ್ ಆಚಾರ್, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.