ಮಡಿಕೇರಿ, ಸೆ. 16: ಸಹಕಾರ ಕ್ಷೇತ್ರದ ಕಾಳಜಿ ಇರುವವರನ್ನು ಮಾತ್ರ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಸಹಕಾರ ಶಿಕ್ಷಣಕ್ಕೆ, ತರಬೇತಿಗೆ ಆಧ್ಯತೆ ನೀಡಲು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು ಕರೆ ನೀಡಿದರು.

ಅವರು ಯೂನಿಯನ್‍ನ 50 ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪ್ರೇರಿತ ಸ್ಪರ್ಧಾ ಮನೋಭಾವವಿದ್ದರೂ ಸಹಕಾರ ಕ್ಷೇತ್ರದ ಕಾಳಜಿ ಕಡಿಮೆಯಾಗುತ್ತಿದೆ. ನಿಜವಾದ ಆಸಕ್ತಿ ಇರುವವರು ಮಾತ್ರ ಸಂಘಗಳ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಾರೆ. ಕಳೆದ ಮಹಾಸಭೆಯಲ್ಲಿ ಚರ್ಚೆಯಾದ, ಆರ್‍ಟಿಸಿಯಲ್ಲಿ ಕರಿಮೆಣಸನ್ನು ದೀರ್ಘಾವಧಿ ಬೆಳೆಯಾಗಿ ನಮೂದಿಸಲು ಕೋರಿದ್ದು ಯಶಸ್ವಿಯಾಗಿದ್ದೇವೆ. ಭತ್ತದ ಕೃಷಿಯಿಂದ ನೈಸರ್ಗಿಕವಾಗಿ ನೀರು ಇಂಗುತ್ತವೆ. ಈ ನಿಟ್ಟಿನಲ್ಲಿ ಉತ್ತಮ ಬೆಂಬಲ ಬೆಲೆ ಒದಗಿಸಲು ರೈತರು ರಾಜಕೀಯ ರಹಿತವಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಯತ್ನಿಸಬೇಕು, ಗೋಣಿಕೊಪ್ಪಲು ಎಪಿಎಂಸಿಯಲ್ಲಿ ನಡೆಯುತ್ತಿರುವ ಕಾಳುಮೆಣಸು ಆಮದು ಸಂಬಂಧಿಸಿದಂತೆ ಸೂಕ್ತ ತನಿಕೆಯಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳು ಆಪದ್ಧನ ನಿಧಿಯನ್ನು ಸರ್ಕಾರದ ಸೆಕ್ಯೂರಿಟಿಯಲ್ಲಿರಿಸಲು ನಿರ್ದೇಶಿಸಿರುವ ಕುರಿತು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಕೃಷಿ ಪತ್ತಿನ ಸಹಕಾರ ಸಂಘ, ಕುರಿತು ತೀವ್ರ ಚರ್ಚೆ ನಡೆದು ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.

ತಿತಿಮತಿ ಪ್ಯಾಕ್ಸ್‍ನ ಸಿ.ಎಂ. ರಾಮಕೃಷ್ಣ, ಚೆಟ್ಟಳ್ಳಿ ಪ್ಯಾಕ್ಸ್‍ನ ಬಲ್ಲಾರಂಡ ಮಣಿ ಉತ್ತಪ್ಪ, ಕೊಡಗು ಕಾಫಿ ಬೆಳೆಗಾರರ ಸಂಘದ ಎಂ.ಬಿ. ದೇವಯ್ಯ, ಮೂರ್ನಾಡು ಟಿ.ಎ.ಪಿ.ಸಿ.ಎಂ.ಎಸ್.ನ ಮಾದಪ್ಪ ಇನ್ನಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಯೂನಿಯನ್ ಉಪಾಧ್ಯಕ್ಷ ಎಸ್.ಪಿ. ನಿಂಗಪ್ಪ, ನಿರ್ದೇಶಕರಾದ ಪ್ರೇಮ ಸೋಮಯ್ಯ, ಹೆಚ್.ಎನ್. ರಾಮಚಂದ್ರ, ಕೊಡಪಾಲು ಗಣಪತಿ, ಯು.ಎಸ್. ಜಗತ್, ಪಿ.ಸಿ. ಅಚ್ಚಯ್ಯ, ಡಿ.ಪಿ. ಬೋಪಣ್ಣ, ಕೆ.ಕೆ. ಮಂದಣ್ಣ, ಎಂ.ಬಿ. ಜೋಯಪ್ಪ, ಕನ್ನಂಡ ಸಂಪತ್ ಹಾಜರಿದ್ದರು.