ಮಡಿಕೇರಿ, ಸೆ. 16 : ಮಡಿಕೇರಿ ನಗರದಲ್ಲಿ ಚೋರರ ಹಾವಳಿ ಅಧಿಕವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿದೆ. ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಆವರಣದಲ್ಲಿ ಚೋರರ ಕೈಚಳಕ ಹೆಚ್ಚಾಗಿದೆಯಂತೆ. ನಿಲ್ಲಿಸಿದ ಆಟೋ, ಇತರ ವಾಹನದಿಂದ ಪೆಟ್ರೋಲ್ ಕದಿಯುವದು, ಆಟೋ ಚಾಲಕರ ಖಾಕಿ ಸಮವಸ್ತ್ರ ವಾಹನದಲ್ಲಿ ಬಿಚ್ಚಿಟ್ಟಿದ್ದರೆ ಅದು ಮಂಗಮಾಯವಾಗುತ್ತಿದೆ. ಅಲ್ಲದೆ ಆಟೋಗಳಿಂದ ವೀಲ್‍ಕ್ಯಾಪ್ ಅಪಹರಿಸುವದು ಇಂತಹ ಹಲವಾರು ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಿರುವದಾಗಿ ಹಲವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ 11ರ ಸುಮಾರಿಗೆ ಆಟೋ ಚಾಲಕರೊಬ್ಬರು ಆಟೋದಲ್ಲಿ ಮೊಬೈಲ್ ಇಟ್ಟಿದ್ದು ಸನಿಹಕ್ಕೆ ಹೋಗಿ ಬರುವಷ್ಟರಲ್ಲಿ ರೂ. 15 ಸಾವಿರ ಮೌಲ್ಯದ ಮೊಬೈಲ್ ನಾಪತ್ತೆಯಾಗಿದೆ. ಈ ಮೊಬೈಲ್‍ನ ಇ.ಎಂ.ಐ. ಸಂಖ್ಯೆಯನ್ನು ಅವರು ಇಟ್ಟುಕೊಳ್ಳದ ಕಾರಣ ಪೊಲೀಸ್ ದೂರು ನೀಡುವದೂ ಸಾಧ್ಯವಾಗಿಲ್ಲ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅಕ್ಕಪಕ್ಕದ ಅಂಗಡಿಗಳ ಸಿ.ಸಿ. ಟಿ.ವಿಯನ್ನು ಪರಿಶೀಲಿಸಲಾಯಿತಾದರೂ ಚಾಣಾಕ್ಷ ಚೋರರು ಇದರಲ್ಲಿ ಸಿಲುಕದೆ ತಮ್ಮ ಕೈಚಳಕ ತೋರಿದ್ದಾರೆ. ಈ ನಡುವೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ಅಳವಡಿಸಿರುವ ಸಿ.ಸಿ. ಕ್ಯಾಮರಾ ಪರಿಶೀಲನೆಗೆ ಪ್ರಯತ್ನಿಸಿದಾಗ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂಬದು ಈ ಸಂದರ್ಭವಷ್ಟೆ ಅಲ್ಲಿನವರಿಗೆ ಅರಿವಾಗಿದೆ.

ಚೋರರ ಈ ಪುಂಡಾಟದಿಂದಾಗಿ ಈ ವ್ಯಾಪ್ತಿಯಲ್ಲಿ ವಿವಿಧ ಚಟುವಟಿಕೆ ನಡೆಸುತ್ತಿರುವವರು ಆತಂಕಪಡುವಂತಾಗಿದೆ. ಖಾಕಿ ಪಡೆ ಈ ಪುಂಡಾಟಿಕೆಯನ್ನು ಹತ್ತಿಕ್ಕಲು ಸೂಕ್ತ ಕ್ರಮ ವಹಿಸಬೇಕೆಂದೊ ಸಾರ್ವಜನಿಕರು ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ.