ಮಡಿಕೇರಿ, ಸೆ. 16: ನಡತೆ, ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದ ಇಂದಿನ ಕಾಲೇಜು ವಿದ್ಯಾರ್ಥಿಗಳು ಮೊಬೈಲಿನ ಹುಚ್ಚು ಪ್ರೇಮಕ್ಕೆ ಬಲಿಯಾಗಿ ಭವಿಷ್ಯದ ಬೆಳವಣಿಗೆಯನ್ನು ಮೊಟಕು ಗೊಳಿಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎ.ಎಂ. ಖಾನ್ ವಿಷಾಧಿಸಿದರು.

ಎಫ್.ಎಂ.ಕೆ.ಎಂ.ಸಿ. ಕಾಲೇಜಿನ 69ನೇ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲಿನ ಅನಗತ್ಯ ಬಳಕೆಯಿಂದ ವಿದ್ಯಾರ್ಥಿಗಳ ಅಮೂಲ್ಯ ಸಮಯ ಮತ್ತು ಆರೋಗ್ಯವೂ ಹಾಳಾಗುತ್ತಿದೆ ಎಂದರು. ಇಂದು ಸಣ್ಣ ಪ್ರಾಯದಲ್ಲೇ ರಕ್ತದ ಒತ್ತಡದಂತಹ ಖಾಯಿಲೆ ಬರಲು ಮೊಬೈಲ್ ಬಳಕೆ ಪ್ರಮುಖ ಕಾರಣ ಎಂದರು. ಸನ್ನಡತೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ಬಿಡುವಿನ ವೇಳೆ ಪಠ್ಯವಿಷಯ, ಭಾಷಾ ವಿಚಾರ, ಉತ್ತಮ ವಿಷಯಗಳ ಕುರಿತು ಚರ್ಚಿಸುವಂತೆ, ಅಧ್ಯಾಪಕರುಗಳಲ್ಲಿ ಸಂಶಯಗಳ ಕುರಿತು ಕೇಳಿ ಕಲಿಯುವಂತೆ ಹಿತ ನುಡಿದರು.

ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಸ್ನೇಹ ಮತ್ತು ವಾತಾವರಣ ಅವರ ಭವಿಷ್ಯ ರೂಪಿಸುತ್ತದೆ ಎಂದರು. ಸ್ನೇಹದ ಮೌಲ್ಯದ ಕುರಿತು ವಿವರಿಸಿದ ಅವರು, ಶಕುನಿಯ ಮಾತಿನಂತೆ ನಡೆದು ಕೆಟ್ಟ ದುರ್ಯೋಧನ ಹಾಗೂ ಕೃಷ್ಣನ ನೆರವಿನಿಂದ ಜಯಶೀಲನಾದ ಅರ್ಜುನರ ಉದಾಹರಣೆ ನೀಡಿದರು. ಹಿರಿಯರ ಮೌಲ್ಯವನ್ನು ಅವರು ಉಳಿಸುವ ಹಣ-ಆಸ್ತಿಯಲ್ಲಿ ಅಳೆಯ ಬಾರದೆಂದ ಅವರು, ಹಿರಿಯರು ಉಳಿಸಿ ಹೋಗುವ ಹೆಸರು, ಹೆಗ್ಗಳಿಕೆಯನ್ನು ಗೌರವಿಸಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರು ಮಕ್ಕಳು ಆಧುನಿಕ ತಂತ್ರಜ್ಞಾನದ ದಾಸರಾಗಬಾರದೆಂದು ಹೇಳಿದರು. ಕಾಲೇಜಿನ ಹಿನ್ನೆಲೆ ಗಳಿಸಿರುವ ಹೆಗ್ಗಳಿಕೆ ಕುರಿತು ಹೇಳಿ, ವಿದ್ಯಾರ್ಥಿಗಳು ಸಂಸ್ಥೆಗೆ ಹೆಸರು ತರುವಂತಾಗಬೇಕೆಂದು ಬಯಸಿದರು. ಮನಸ್ಸು ಬಯಸಿದರೆ ಸ್ವರ್ಗವನ್ನು ನರಕ-ನರಕವನ್ನು ಸ್ವರ್ಗವನ್ನಾಗಿ ಬದಲಿಸಬಹುದೆಂದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಲೋಹಿತ್ ಎಂ.ಆರ್., ಉಪಾಧ್ಯಕ್ಷೆಯಾಗಿ ಜನನಿ ಎಂ.ಡಿ., ಕಾರ್ಯದರ್ಶಿಯಾಗಿ ಅಹಲ್ಯ ಅಪ್ಪಚ್ಚು, ಜಂಟಿ ಕಾರ್ಯದರ್ಶಿಗಳಾಗಿ ಸುಭಾಶ್ ಸಿ.ಎಸ್., ತೃಪ್ತಿ ಪಿ.ಕೆ., ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಅರುಣ್ ಕುಮಾರ್, ಪಿಎಸ್. ನೀಲಮ್ಮ ಬಿ.ಎಂ., ಕ್ರೀಡಾ ಕಾರ್ಯದರ್ಶಿಗಳಾಗಿ ಕಿರಣ ಬಿ.ಪಿ. ಮತ್ತು ಸ್ವಪ್ನ ಎಸ್.ಆರ್. ಚುನಾಯಿತರಾಗಿದ್ದು, ವಿದ್ಯಾರ್ಥಿ ಸಂಘದ ಸಲಹೆಗಾರ ಡಾ. ಶ್ರೀಧರ ಹೆಗಡೆ ಪ್ರಮಾಣ ವಚನ ಬೋಧಿಸಿದರು.

ಡಾ. ಶ್ರೀಧರ ಹೆಗಡೆ ಅವರಿಂದ ಸ್ವಾಗತ, ನೀಲಮ್ಮಳಿಂದ ಸುಶ್ರಾವ್ಯ ಪ್ರಾರ್ಥನೆ, ಅಹಲ್ಯ ಮತ್ತು ಮೋಕ್ಷ ಪರಿಚಯ, ಲೋಹಿತ್ ಪ್ರಾರ್ಥನೆ ಮಾಡಿದರು.