ವೀರಾಜಪೇಟೆ, ಸೆ. 16: ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಉತ್ಸವ ಸಮಿತಿಗಳು ಸಮುದಾಯಗಳ ಬಾಂಧವರಿಗಾಗಿ ಆಯೋಜಿಸುವಂತಹ ಸ್ಪರ್ಧಾ ಕಾರ್ಯಕ್ರಮಗಳಿಂದ ಒಗ್ಗಟ್ಟು ಮೂಡಿಸಲು ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.

ಇಲ್ಲಿನ ಓಣಂ ಉತ್ಸವ ಆಚರಣಾ ಸಮಿತಿಯಿಂದ ವೀರಾಜಪೇಟೆ ಪಟ್ಟಣದ ಮೀನುಪೇಟೆ ಚೈತನ್ಯ ಮಠಪುರ ಮುತ್ತಪ್ಪ ಕಲಾ ಮಂಟಪದಲ್ಲಿ ಆಯೋಜಿಸಲಾಗಿದ್ದ 9ನೇ ವರ್ಷದ ಓಣಂ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು ಕೊಡಗು ಮತ್ತು ಕೇರಳದ ಜನರು ಪರಸ್ಪರ ಹೊಂದಾಣಿಕೆಯಿಂದ ಹಬ್ಬ ಉತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಇಂತಹ ಉತ್ಸವಗಳಿಗೆ ಉತ್ತಮ ಸಹಕಾರ ನೀಡಿದಂತಾಗಿದೆ, ಮುಂದೆಯೂ ಇದೇ ರೀತಿಯಾಗಿ ಉತ್ಸವಗಳನ್ನು ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಓಣಂ ಆಚರಣಾ ಸಮಿತಿ ಅಧ್ಯಕ್ಷ ಇ.ಸಿ. ಜಿವನ್ ಅವರನ್ನು ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಸನ್ಮಾನಿಸಿದರು.

ತಾಲೂಕು ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಚುತನ್ ಹಾಗೂ ಜೆ.ಡಿ.ಎಸ್. ಪಕ್ಷದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ವಿಕಲಚೇತನರು, ಹಿರಿಯ ನಾಗರಿಕರು ನಿರ್ಗತಿಕರು, ಅಂಧರು, ಮಹಿಳೆಯರು ನಿರ್ಗತಿಕರುಗಳಿಗೆ ಆಶ್ರಯ ಕೇಂದ್ರವಾಗಿರುವ ಮಡಿಕೇರಿಯ ‘ವಿಕಾಸ್ ಜನಸೇವಾ ಟ್ರಸ್ಟ್’ಗೆ ಸಹಾಯಧನ ನೀಡಲಾಯಿತು.

ಇದಕ್ಕೂ ಮೊದಲು ಬೆಳಿಗ್ಗೆ ಹಮ್ಮಿಕೊಂಡಿದ್ದ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಹೊಸಕೋಟೆ ಫ್ರೆಂಡ್ಸ್ ತಂಡ ಪ್ರಥಮ ಬಹುಮಾನ ಪಡೆದು ಕೊಂಡಿತು, ಬಿಟ್ಟಂಗಾಲದ ಎನ್.ವೈ.ಸಿ. ತಂಡ ದ್ವಿತೀಯ ಬಹುಮಾನ ಪಡೆದರೆ. ಎಡಮಕ್ಕಿ ಅಯ್ಯಪ್ಪ ದೇವಾಲಯ ಸಮಿತಿ ಮೂರನೇ ಬಹುಮಾನ ಪಡೆಯಿತು.

ಸಮಾರಂಭದಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದೂ ಮಲಯಾಳಿ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸಮಿತಿಯ ಸಿ.ಆರ್. ಬಾಬು, ಎಂ.ಆರ್. ಗೋವಿಂದನ್, ಸಿ.ಆರ್. ಸಜೀವನ್, ಕೃಷ್ಣನ್ ಕುಟ್ಟಿ, ಟಿ.ಎಸ್. ಗೋವಿಂದನ್, ಟಿ.ಕೆ. ರಾಜನ್, ಟಿ.ಕೆ. ಪದ್ಮನಾಭನ್ ಮುಂತಾದವರು ಉಪಸ್ಥಿತರಿದ್ದರು. ಎಂ.ಎಂ. ಶಶಿಧರನ್ ಸ್ವಾಗತಿಸಿ ನಿರೂಪಿಸಿದರು. ಬೆಳಿಗ್ಗೆಯಿಂದ ನಡೆದ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಮಲಯಾಳಿ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.