ಮಡಿಕೇರಿ, ಸೆ. 16: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಐ.ಬಿ.ಪಿಎಸ್. ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ನಗರದ ಬ್ಲಾಸಂ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಗುಪ್ತಾಜಿ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ಐ.ಪಿ.ಬಿ.ಎಸ್. ಪರೀಕ್ಷೆ ತೆಗೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಮುಂಬರುವ ದಿನಗಳಲ್ಲಿ ಅವಕಾಶವು ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಉದ್ಯೋಗ ಆಕಾಂಕ್ಷಿಗಳು ಹೆಚ್ಚು ಗಮನವಿಟ್ಟು ಅಧ್ಯಯನ ನಡೆಸಿ ಬ್ಯಾಂಕ್‍ನಲ್ಲಿ ಉದ್ಯೋಗ ಪಡೆಯುವಂತೆ ಸಲಹೆ ಮಾಡಿದರು.

ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ರಮೇಶ್ ನರಸಯ್ಯ ಮಾತನಾಡಿ ಬ್ಯಾಂಕಿಂಗ್ ವಲಯವು ಇಂದಿನ ದಿನಗಳಲ್ಲಿ ಹೆಚ್ಚು ಉದ್ಯೋಗ ನೀಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆಯುವಂತೆ ಸೂಚಿಸಿದರು.

ಬ್ಯಾಂಕಿಂಗ್ ಪರೀಕ್ಷೆಗೆ ಸಮಯ ಮತ್ತು ನಿರ್ದಿಷ್ಟತೆ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಬಗ್ಗೆ ಹೆಚ್ಚು ಗಮನವಿಟ್ಟು ಪರೀಕ್ಷೆಗೆ ತಯಾರಿ ನಡೆಸಬೇಕು ಮತ್ತು ಪರೀಕ್ಷೆಗೆ ಸಂಬಂಧಿಸಿದಂತಹ ಉತ್ತಮ ಪುಸ್ತಕಗಳನ್ನು ಹೆಚ್ಚು ಅಧ್ಯಯನ ಮಾಡಬೇಕು. ದಿನಪತ್ರಿಕೆಗಳನ್ನು ಪ್ರತಿನಿತ್ಯ ಓದಬೇಕು. ಪರೀಕ್ಷೆಗೂ ಮುಂಚೆ ಪ್ರಾಯೋಗಿಕವಾಗಿ ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡರೆ ಉತ್ತಮ ಫಲಿತಾಂಶ ಬರುತ್ತದೆ ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ ಅವರು ಮಾತನಾಡಿ ಅಕ್ಟೋಬರ್, 30 ರವರೆಗೆ ಐ.ಬಿ.ಪಿ.ಎಸ್.

ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪರೀಕ್ಷಾರ್ಥಿಗಳಿಗೆ 15 ದಿನ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದು, ಪರೀಕ್ಷಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಪ್ರದಾನ್ ಇದ್ದರು.