ಮಡಿಕೇರಿ, ಸೆ. 16: ನಗರ ವ್ಯಾಪ್ತಿಯೊಳಗೆ ದಿನನಿತ್ಯ 15 ಗಾಡಿಗಳು ಕಸವಿಲೇವಾರಿ ಸಂಬಂಧ ಪ್ರತಿನಿತ್ಯ ಬೆಳಿಗ್ಗೆ 6.30 ಗಂಟೆಯೊಳಗೆ ಎಲ್ಲಾ ಕಸ ತೆಗೆದುಕೊಂಡು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರುವದನ್ನು ಖುದ್ದು ಹೊರ ಗುತ್ತಿಗೆ ಏಜೆನ್ಸಿಯವರಿಂದ ಮತ್ತು ನಮ್ಮ ಆರೋಗ್ಯ ಶಾಖೆಯಿಂದ ಸ್ವಚ್ಛತೆ ಕೆಲಸ ನಿರ್ವಹಿಸಿದ ಬಗ್ಗೆ ಪರಿಶೀಲಿಸಿರುತ್ತೇನೆ. ಆದರೂ ಸಹ ಕೆಲವು ಕಡೆ ಕಸ ತೆಗೆದ ಮೇಲೆಯೂ ಸಾರ್ವಜನಿಕರು ಟ್ರ್ಯಾಕ್ಟರಿಗೆ ಕೊಡದೇ ಅಲ್ಲಿ ಇಲ್ಲಿ ಕಸವನ್ನು ಎಸೆದಿರುವ ದೃಶ್ಯಾವಳಿಗಳು ನಗರಸಭೆಯಿಂದ ಅಳವಡಿಸಲಾಗಿರುವ ಸಿ.ಸಿ.ಟಿ.ವಿಯ ಛಾಯಾಚಿತ್ರಗಳಲ್ಲಿ ಸೆರೆ ಹಿಡಿಯಲಾಗಿದೆ. ಅಲ್ಲಿ ಇಲ್ಲಿ ಕಸವನ್ನು ಹಾಕದಂತೆ ಬ್ಯಾನರ್ ಅಳವಡಿಸಿ ಸಾರ್ವಜಿಕರಿಗೆ ಮನವರಿಕೆ ಮಾಡಲಾಗಿದೆ. ಆದರೂ ಸಹ ಕಸವನ್ನು ಟ್ರ್ಯಾಕ್ಟರ್‍ಗೆ ನೀಡದೇ ಈ ರೀತಿ ಮಾಡುತ್ತಿರುವದನ್ನು ನಿಲ್ಲಿಸಲು ಈ ಮೂಲಕ ಕೋರಿದೆ. ಸಿಸಿ.ಟಿ.ವಿ.ಯ ಛಾಯಾಚಿತ್ರದಲ್ಲಿ ಸೆರೆಯಾಗುತ್ತಿರುವ ಈ ರೀತಿ ಘಟನೆಗಳನ್ನು ಅತಿ ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ದಂಡ ವಿಧಿಸುವದನ್ನು ಕಾರ್ಯರೂಪಕ್ಕೆ ತರಲಾಗುವದು. ಸಾರ್ವಜನಿಕರು ಇನ್ನು ಮುಂದೆ ಕಸವನ್ನು ಟ್ರ್ಯಾಕ್ಟರ್‍ಗೆ ನೀಡಿ ಮಡಿಕೇರಿಯನ್ನು ಸ್ವಚ್ಛ ಮಾಡಲು ಸಹಕರಿಸಬೇಕಾಗಿ ನಗರಸಭೆ ಆಡಳಿತ ಮಂಡಳಿ ಕೋರಿದೆ.