ಮಡಿಕೇರಿ, ಸೆ. 16: ಕುಡಿಯುವ ನೀರು ಪೂರೈಕೆಗೆ ಕೊಡಗು ಜಿಲ್ಲೆಗೆ ರೂ. 10 ಕೋಟಿ ಹೆಚ್ಚುವರಿ ಅನುದಾನ ಒದಗಿಸಲು ಪ್ರಯತ್ನಿಸುವ ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಭರವಸೆ ನೀಡಿದರು.ಇಲ್ಲಿನ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಜಿ.ಪಂ. ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲನೆ ಸಂದರ್ಭ ಜಿ.ಪಂ. ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಳೆದ ವರ್ಷದ ಕಾಮಗಾರಿಗಳು ಪೂರ್ಣಗೊಂಡಿರುವ ದಾಗಿ ಮಾಹಿತಿ ನೀಡಿದರು. ಕೆ.ಡಿ.ಪಿ. ಸದಸ್ಯ ಪಾಪು ಸಣ್ಣಯ್ಯ ಕಟ್ಟೆಮಾಡುವಿನಲ್ಲಿ ಇನ್ನೂ ಕೂಡ ನೀರಿನ ಸಂಪರ್ಕ ಕಲ್ಪಿಸದಿರುವ ಬಗ್ಗೆ ಗಮನ ಸೆಳೆದರು.

ಈ ಸಂದರ್ಭ ಸಚಿವರು ಕುಡಿಯುವ ನೀರಿನ ಯೊಜನೆಗಾಗಿ ಈಗಾಗಲೇ ಜಿ.ಪಂ.ಗೆ ರೂ. 5.50 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು. ಸಭೆಯಲ್ಲಿದ್ದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ನೀರಿಗಾಗಿ ಹೆಚ್ಚುವರಿ ರೂ. 10 ಕೋಟಿ ಒದಗಿಸುವಂತೆ ಸಚಿವರಲ್ಲಿ ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವರು ಬೆಂಗಳೂರಿಗೆ ತೆರಳಿ ಈ ನಿಟ್ಟಿನಲ್ಲಿ ಪ್ರಯತ್ನಿಸುವದಾಗಿ ಭರವಸೆ ನೀಡಿದರು.

ತೋಟದ ಮನೆಗೆ ಅನುಮತಿ

ಫಾರಂ ಹೌಸ್‍ಗಳಿಗೆ ನಿರಾಕ್ಷೇಪಣಾ ಪತ್ರ ದೊರಕುತ್ತಿಲ್ಲ. ಇದರಿಂದ ಮನೆ ಕಟ್ಟಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅವರು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸಿದ

(ಮೊದಲ ಪುಟದಿಂದ) ಸಚಿವರು, ಫಾರಂ ಹೌಸ್ ಬದಲಿಗೆ ತೋಟದ ಮನೆ ಎಂದು ಬದಲಾವಣೆ ಮಾಡಿಕೊಂಡು ನಿರಾಕ್ಷೇಪಣಾ ಪತ್ರ ನೀಡುವಂತೆ ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ- ಸಕ್ರಮ ಯೋಜನೆಯಡಿ ಸುಮಾರು 9 ಸಾವಿರ ಕಡತಗಳು ವಿಲೇವಾರಿಗೆ ಬಾಕಿ ಇರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಕಡತಗಳನ್ನು ಹಾಗೇ ಉಳಿಸಿಕೊಳ್ಳಬೇಡಿ ಅನರ್ಹವಾದ ಕಡತಗಳನ್ನು ತಿರಸ್ಕರಿಸಿ, ಅರ್ಹವಾದವುಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದರು.

ಕ್ರೀಡಾ ಸವಲತ್ತು ನೀಡಿ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಬಯಸುತ್ತಿದ್ದ ಸಂದರ್ಭ ಮಾತನಾಡಿದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಕ್ರೀಡಾ ಇಲಾಖೆ ಅಧಿಕಾರಿ ಮೇಲೆ ಸಾಕಷ್ಟು ದೂರುಗಳು ಬರುತ್ತಿವೆ. ಸವಲತ್ತು ನೀಡುತ್ತಿಲ್ಲ; ಯಾವದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ದೂರು ಬಂದಿದೆ. ಈಗಾಗಲೇ ದಸರಾ ಕ್ರೀಡಾಕೂಟಗಳು ಆರಂಭವಾಗಿದ್ದು, ಜಿಲ್ಲಾ ಕ್ರೀಡಾಂಗಣದ ಸ್ವಚ್ಛತೆ ಕಡೆಗೂ ಗಮನ ಹರಿಸುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಬ್ಯಾಡ್‍ಮಿಂಟನ್ ಆಟಕ್ಕೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಧನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅವರು, ಜಿಲ್ಲೆಯಿಂದ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಇಲಾಖೆಯಿಂದ ಯಾವದೇ ಭತ್ಯೆ, ಸಮವಸ್ತ್ರಗಳನ್ನು ನೀಡುತ್ತಿಲ್ಲ. ಹೊರ ರಾಜ್ಯದಲ್ಲಿ ಜಿಲ್ಲೆಯ ಹೆಸರೇ ಕಾಣದಂತಾಗಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಕೋರಿದರು. ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು, ಸಮವಸ್ತ್ರ ಒದಗಿಸಲು ಈಗಾಗಲೇ ಟೆಂಡರ್ ಕರೆದಿರುವ ಬಗ್ಗೆ ಅಧಿಕಾರಿ ಮಾಹಿತಿ ನೀಡಿದ್ದಾರೆಂದು ಸಭೆಗೆ ತಿಳಿಸಿದರು.

ಕಟ್ಟಡ ತೆರವಿಗೆ ಕ್ರಮ

ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ತಲೆ ಎತ್ತಿರುವ 5 ಅಂತಸ್ತಿನ ಕಟ್ಟಡವನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲು ಕ್ರಮ ಕೈಗೊಳ್ಳುವದಾಗಿ ನಗರಸಭಾ ಪೌರಾಯುಕ್ತೆ ಶುಭ ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭ ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಎಸ್. ಲೋಕೇಶ್ ಸಾಗರ್, ಕುಶಾಲನಗರ ಹಾಗೂ ಮಡಿಕೇರಿ ಸಣ್ಣ ಪಟ್ಟಣವಾಗಿದ್ದು, ಕಟ್ಟಡ ನಿರ್ಮಾಣವಾಗುವವರೆಗೆ ಸುಮ್ಮನಿದ್ದು, ನಂತರ ತೆರವುಗೊಳಿಸುವದಕ್ಕಿಂತ ನಿರ್ಮಾಣ ಹಂತದಲ್ಲೇ ತಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಲಹೆ ಮಾಡಿದರು. ಸ್ಪಂದಿಸಿದ ಸಚಿವರು, ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿರುವ ಸಂದರ್ಭದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಡೆಹಿಡಿಯುವಂತೆ ಆಯುಕ್ತರಿಗೆ ಸೂಚಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಮರಳು ಟೆಂಡರ್‍ನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಜಿಲ್ಲಾಧಿಕಾರಿಯವರ ಸೂಚನೆಯಂತೆ ಟೆಂಡರ್‍ನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ನಂತರದಲ್ಲಿ ಬೇರೆ ಜಿಲ್ಲೆಯವರಿಗೆ ನೀಡಿ ಎಂದು ಸಚಿವರು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆರ್.ಟಿ.ಒ ವಸತಿ ಗೃಹಗಳ ದುರಸ್ತಿ ಸರಿಪಡಿಸಿ ಕೊಡಗಿನಲ್ಲಿ ರಸ್ತೆ ನಿರ್ಮಾಣದಲ್ಲಿ ಆಗಿರುವ ನ್ಯೂನತೆಯನ್ನು ಸರಿಪಡಿಸುವಂತೆ ಸೂಚಿಸಿದರು.

ಆಹಾರ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಇದುವರೆಗೆ 3618 ಬಿ.ಪಿ.ಎಲ್ ಕುಟುಂಬಗಳಿಗೆ ಪಡಿತರ ಚೀಟಿ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ವಿಯೆಟ್ನಾಂ ಮೆಣಸು

ಗೋಣಿಕೊಪ್ಪಲು ಕೃಷಿ ಮಾರುಕಟ್ಟೆಯಲ್ಲಿ ವಿಯಟ್ನಾಂನಿಂದ ಕಾಳುಮೆಣಸು ತರಿಸಿ ಮಾರಾಟ ಮಾಡಿದರ ಬಗ್ಗೆ ವೀಣಾ ಅಚ್ಚಯ್ಯ ಅವರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಚಿವರು ಉತ್ತರಿಸಿ ಅಂತಹ ವರ್ತಕರ ಮೇಲೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿ ನಾಲೆಗೆ ನೀರು ಬಿಡುತ್ತಿರುವದಾಗಿ ತಿಳಿಸಿದರು. ಹಾರಂಗಿ ಜಲಾಶಯದ ಬಳಿ ನಿರ್ಮಿಸುತ್ತಿರುವ ಕಾರಂಜಿ ಬಗ್ಗೆ ವಿವರ ಪಡೆದ ಸಚಿವರು ತುರ್ತಾಗಿ ಕೆಲಸ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವರು ಭಾಗಮಂಡಲದಲ್ಲಿ ಮೇಲು ಸೇತುವೆಗೆ ಶೀಘ್ರದಲ್ಲಿಯೇ ಭೂಮಿ ಪೂಜೆ ನೆರವೇರಿಸುವದಾಗಿ ತಿಳಿಸಿದರು.

ಹಕ್ಕುಪತ್ರ ನೀಡಿ

ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಡಿಸೋಜ ಅವರು ಸೋಮವಾರಪೇಟೆ ತಾಲೂಕು ಯಡಿಯೂರಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಇದುವರೆಗೂ ಪಾಣಿ ಹಕ್ಕುಪತ್ರ ದೊರೆತಿರುವದಿಲ್ಲ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತುರ್ತಾಗಿ ಅರ್ಹರಿಗೆ ಹಕ್ಕುಪತ್ರ ನೀಡುವಂತೆ ಸೂಚನೆ ನೀಡಿದರು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಕೆಎಸ್‍ಆರ್‍ಟಿಸಿಗೆ ಕುಶಾಲನಗರದ ಬಳಿ ಬಸ್ಸು ಘಟಕ ನಿರ್ಮಿಸಲು ಸೂಕ್ತ ಜಾಗ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸ್ವಚ್ಚತೆಗೆ ಆಧ್ಯತೆ ನೀಡಬೇಕೆಂದು ಸಚಿವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಯಾದ ಕೆ.ವಿ.ಸುರೇಶ್ ಅವರು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಸಿಸಿ ಕ್ಯಾಮರ ಅಳವಡಿಸಲಾಗಿದ್ದು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಗೀಜರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲೂ ಸ್ವಚ್ಚತೆಗೆ ಆಧ್ಯತೆ ನೀಡಬೇಕು ಹಾಗೂ ತ್ವರಿತವಾಗಿ ಗೀಜರ್ ಅಳವಡಿಕೆ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಕೃಷಿ ಇಲಾಖೆಯ ಉಪ ನಿರ್ದೇಶಕರು ಇದುವರೆಗೂ ಜಿಲ್ಲೆಯಲ್ಲಿ 2670 ರೈತರು 2.3 ಕೋಟಿ ಬರ ಪರಿಹಾರವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು.

ಸಚಿವರು ಪ್ರತಿಕ್ರಿಯಿಸಿ ಕೃಷಿ ಇಲಾಖೆ ವತಿಯಿಂದ ಟಾರ್ಪಲ್ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಲೋಕೇಶ್ ಸಾಗರ್ ಅವರು ಜಿಲ್ಲೆಯಲ್ಲಿ ಕುಶಾಲನಗರ ಕಲಾಭವನ ನಿರ್ಮಾಣ ವಿಳಂಬವಾಗುತ್ತಿರುವ ಬಗ್ಗೆ ಗಮನ ಸೆಳೆದರು.

ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸಚಿವರು ಕರೆ ನೀಡಿದರು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕೆÀ್ಷ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಇತರ ಇಲಾಖೆಯ ಅಧಿಕಾರಿಗಳು ಇದ್ದರು.