ಸುಂಟಿಕೊಪ್ಪ, ಸೆ. 16: ನಮ್ಮ ಮುಂದಿನ ಶಿಕ್ಷಣದ ಬಗ್ಗೆ ಪೋಷಕರ,ಗೆಳೆಯರ ಮತ್ತು ಇನ್ನೊಬ್ಬರ ಮಾತಿನಂತೆ ಮುಂದುವರೆಯುತ್ತೇವೆ. ಈ ನಿರ್ಧಾರ ವಿದ್ಯಾರ್ಥಿಗಳ ವಿಫಲತೆಗೆ ಕಾರಣವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸವಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ ಅಭಿಪ್ರಾಯಪಟ್ಟರು.

ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಸಮೀಪದ ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹತ್ತನೇ ತರಗತಿ ಮತ್ತು ಪಿಯುಸಿ ಓದಿದ ನಂತರ ತಾನು ಉದ್ಯೋಗಕ್ಕೆ ಹೋಗಬೇಕೆನ್ನುವವರಿಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಈ ಶಿಕ್ಷಣವನ್ನು ಕನಿಷ್ಟ ವಿದ್ಯಾರ್ಹತೆ ಎಂದು ನಿಗದಿಪಡಿಸಿದೆ ಹಾಗೂ ಒಂದು ವೇಳೆ ಉದ್ಯೋಗ ಸಿಕ್ಕಿದರೂ ಅದು ತಮ್ಮ ಅಭಿರುಚಿಗೆ ಸೂಕ್ತವಾಗಿರುವದಿಲ್ಲ. ಆದರಿಂದ ಉತ್ತಮ ಶಿಕ್ಷಣಕ್ಕಾಗಿ ತಮ್ಮನ್ನೇ ಮೀಸಲಿಟ್ಟು ತಾಂತ್ರಿಕ ಶಿಕ್ಷಣ, ಸ್ವಯಂ ಉದ್ಯೋಗ ತರಬೇತಿ ಕೇಂದ್ರ, ಛಾಯಚಿತ್ರ ತರಬೇತಿ, ವಕೀಲ ತರಬೇತಿ, ಮಾಧ್ಯಮ ಕ್ಷೇತ್ರದ ತರಬೇತಿಗಳನ್ನು ಪಡೆದುಕೊಂಡರೆ ಬದುಕಿನಲ್ಲಿ ಏನಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಾಜಸುಂದರಂ, ಇಂದಿನ ಕೆಲವು ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಇದೆ. ಯಾವದೇ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೂ ಅದು ಆಸಕ್ತಿಯಿಂದ ಕೂಡಿರಬೇಕು ಎಂದರು.

ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಸಿ. ವಿಶ್ವನಾಥ್ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಲ್ಲಿ ನಡೆಸಿದರೆ ಮಾತ್ರ ಅದಕ್ಕೆ ಒಂದು ರೀತಿಯ ಅರ್ಥ ಬರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉಜ್ವಲ ಭವಿಷ್ಯವನ್ನು ರೂಪಿಸುವಂತಾಗಲು ಕಟಿಬದ್ಧರಾಗಬೇಕು ಎಂದರು.

ವೇದಿಕೆಯಲ್ಲಿ ಕೊಡಗು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದ್ಪುಜೆ ಬೋಜಪ್ಪ, ಕಾರ್ಯದರ್ಶಿ ಬೈತ್ತಡ್ಕ ಬೆಳ್ಯಪ್ಪ, ಜಂಟಿ ಕಾರ್ಯದರ್ಶಿ ಕುದ್ಪುಜೆ ಶಾರದಾ, ಖಜಾಂಚಿ ಪೊನ್ನಚ್ಚನ ಸೋಮಣ್ಣ, ನಿರ್ದೇಶಕರಾದ ಹೊಸೋಕ್ಲು ಟಿ. ಪೊನ್ನಪ್ಪ, ತಳೂರು ಕಾಳಪ್ಪ, ಪ್ರೌಢಶಾಲೆಯ ಶಿಕ್ಷಕಿ ಪವಿತ ಇದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಪ್ರಮೀಳ ಸ್ವಾಗತಿಸಿ, ಶಿಕ್ಷಕಿ ಬಿ.ಬಿ. ಸ್ಮೀತಾ ವಂದಿಸಿ, ವಿದ್ಯಾರ್ಥಿನಿ ನಿಸರ್ಗ ನಿರೂಪಿಸಿದರು.