ಮಡಿಕೇರಿ, ಸೆ. 16: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್

ರೂ. 4.69 ಕೋಟಿ ನಿವ್ವಳ ಲಾಭ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬಿ.ಡಿ. ಮಂಜುನಾಥ್ ತಿಳಿಸಿದ್ದಾರೆ.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆ.ಎಸ್. ಪೂವಯ್ಯ, ನಿರ್ದೇಶಕರಾದ ಬಲ್ಲಾರಂಡ ಮಣಿ ಉತ್ತಪ್ಪ, ಕನ್ನಂಡ ಸಂಪತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತೀಂದ್ರ, ಪ್ರಧಾನ ವ್ಯವಸ್ಥಾಪಕ ಮುತ್ತಣ್ಣ ಮತ್ತಿತರರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಬ್ಯಾಂಕ್‍ನಲ್ಲಿ 271 ಸಹಕಾರ ಸಂಘಗಳಿದ್ದು, ರೂ. 17.71 ಕೋಟಿ ಪಾಲು ಬಂಡವಾಳ ಹೊಂದಿದೆ. ರೂ. 65.83 ಕೋಟಿ ಸ್ವಂತ ಬಂಡವಾಳ, ರೂ. 1,101.10 ಕೋಟಿ ದುಡಿಯುವ ಬಂಡವಾಳ, 741.03 ಠೇವಣಿ ಸಂಗ್ರಹವಾಗಿದೆ. ನಬಾರ್ಡ್ ಅಪೆಕ್ಸ್ ಬ್ಯಾಂಕಿನಿಂದ ರೂ. 292.90 ಕೋಟಿ ಸಾಲ ಪಡೆಯಲಾಗಿದೆ. ರೂ. 366.91 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

2016-17ನೇ ಸಾಲಿನಲ್ಲಿ ರೂ. 600.10 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಇದರಲ್ಲಿ 395.95 ಕೋಟಿ ಕೃಷಿ ಸಾಲ ವಿತರಣೆ, 204.15 ಕೋಟಿ ರೂ. ಕೃಷಿಯೇತರ ಸಾಲ ವಿತರಣೆ ಮಾಡಲಾಗಿದೆ. ಶೇ. 98.59 ರಷ್ಟು ಸಾಲ ವಸೂಲಾತಿ ಪ್ರಮಾಣ ಶೇ.99.36 ರಷ್ಟು ಕೃಷಿ ಸಾಲದ ವಸೂಲಾತಿ, 96.91 ಕೃಷಿಯೇತರ ಸಾಲದ ವಸೂಲಾತಿಯಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ, ದಿನಾಂಕ 20.06.2017ಕ್ಕೆ ಹೊರಬಾಕಿ ನಿಂತ ಅಲ್ಪಾವಧಿ ಬೆಳೆ ಸಾಲ ಪಡೆದ ಗರಿಷ್ಠ ರೂ. 50 ಸಾವಿರದಂತೆ 33967 ರೈತ ಸದ್ಯರುಗಳಿಗೆ ರೂ. 151.81 ಕೋಟಿ ಮನ್ನಾ ಪ್ರಯೋಜನ ದೊರೆಯಲಿದೆ. ರೂ.50 ಸಾವಿರಕ್ಕೂ ಮೇಲ್ಪಟ್ಟು ಸಾಲ ಪಡೆದ ರೈತ ಸದಸ್ಯರು ಸಾಲದ ಅವಧಿ ದಿನಾಂಕ ಅಥವಾ ದಿನಾಂಕ 20.06.2018 ರೊಳಗೆ ರೂ.50 ಸಾವಿರಕ್ಕಿಂತ ಹೆಚ್ಚಿನ ಸಾಲವನ್ನು ಮರುಪಾವತಿಸಿದಲ್ಲಿ ಮಾತ್ರ ಸಾಲ ಮನ್ನಾ ಪ್ರಯೋಜನ ದೊರೆಯಲಿದೆ.

ಇದಲ್ಲದೆ, ದಿನಾಂಕ 20.06.2017ಕ್ಕೆ ಹೊರಬಾಕಿ ನಿಂತ ವಾಯಿದೆ ಮೀರಿದ ಸಾಲಗಾರರು ರೂ.50 ಸಾವಿರಕ್ಕಿಂತ ಹೆಚ್ಚಿನ ಸಾಲವನ್ನು ದಿನಾಂಕ 3.12.2017 ರೊಳಗೆ ಸಾಲ ಮರುಪಾವತಿಸಿದಲ್ಲಿ ಮಾತ್ರ ಸಾಲ ಮನ್ನಾ ಪ್ರಯೋಜನ ದೊರೆಯಲಿದೆ. ಜಿಲ್ಲೆಯ ದ್ರವ್ಯ ಸಂಪತ್ತನ್ನು ಜಿಲ್ಲೆಯ ಜನತೆಗಾಗಿ ಮೀಸಲಿರಿಸಿರುವ ಹಾಗೂ ಜಿಲ್ಲೆಯಲ್ಲಿ “ನಮ್ಮ ಬ್ಯಾಂಕ್” ಎಂದೇ ಖ್ಯಾತಿಗಳಿಸಿರುವ “ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ” ಅಭಿವೃದ್ಧಿಗೆ ಜಿಲ್ಲೆಯ ಸಮಸ್ತ ಜನತೆ ಸಹಕರಿಸುವಂತೆ ಕೋರಿದರು. ಮಹಾಸಭೆ: ಬ್ಯಾಂಕಿನ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. 20 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.