*ಗೋಣಿಕೊಪ್ಪಲು, ಸೆ. 18: ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಜಿಲ್ಲೆ ಶೂನ್ಯ ಅಭಿವೃದ್ಧಿಯನ್ನು ಕಂಡಿದೆ. ರಸ್ತೆ ನಿರ್ಮಾಣದ ಕಾಮಗಾರಿ ಅನುದಾನ 100 ಕೋಟಿ ಇಲಾಖೆಯ ಖಾತೆಯಲ್ಲೆ ಉಳಿದುಕೊಂಡಿದೆ ಎಂದು ಶಾಸಕ ಬೋಪಯ್ಯ ಆರೋಪಿಸಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ವೀರಾಜಪೇಟೆ ತಾಲೂಕು ಬಿ.ಜೆ.ಪಿ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ನಾಲ್ಕೂವರೆ ವರ್ಷಗಳಿಂದ ಜಿಲ್ಲೆ ಅಭಿವೃದ್ಧಿ ಕಾಣದೆ ಸೊರಗಿದೆ. ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ.

(ಮೊದಲ ಪುಟದಿಂದ) ಕೊಡಗಿಗೆ ವಿಶೇಷ ಅನುದಾನ ನೀಡಿ ಅಭಿವೃದ್ದಿಗೆ ಸಹಕರಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರೂ ಯಾವದೇ ಸ್ಪಂದನೆ ದೊರೆತ್ತಿಲ್ಲ. ನಾಲ್ಕು ವರ್ಷಗಳಲ್ಲಿ 50 ಕೋಟಿ ಅನುದಾನದಂತೆ 200 ಕೋಟಿ ಅನುದಾನ ಕೊಡಗಿನ ಅಭಿವೃದ್ದಿಗೆ ನೀಡಿರುವದಾಗಿ ಕಾಂಗ್ರೆಸ್ ಸರಕಾರ ಹೇಳಿದೆ. ಆದರೆ ನಾಲ್ಕು ವರ್ಷಗಳಲ್ಲಿ ಕೇವಲ 41 ಕೋಟಿ ಅನುದಾನ ಮಾತ್ರ ದೊರೆತಿದೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರದ ದುರಾಡಳಿತವನ್ನು ಖಂಡಿಸಿ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ತಾ. 26ರಂದು ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಹಾಕಿ ಹಾಗೂ ದಸರಾ ಹಬ್ಬಗಳಿಗೆ ಬಿ.ಜೆ.ಪಿ. ಸರಕಾರ ಹೆಚ್ಚಿನ ಅನುದಾನವನ್ನು ನೀಡುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಕೊಡಗಿನ ಜನರನ್ನು ದಿಕ್ಕರಿಸುವ ನಿಟ್ಟಿನಲ್ಲಿ ಅನುದಾನವನ್ನು ಕಡಿತಗೊಳಿಸಿದೆ ಎಂದು ದೂರಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಜಾತಿ ವಿಷಬೀಜ ಬಿತ್ತುವ ಬದಲು ಬಿ.ಜೆ.ಪಿ.ಗೆ ಹೆಗಲು ನೀಡಿ ಮುಂದಿನ ಚುನಾವಣೆಯಲ್ಲಿ ಗೆಲುವು ತರುವ ಕೆಲಸ ಕಾರ್ಯಕರ್ತರಿಂದ ನಡೆಯ ಬೇಕಾಗಿದೆ. ಕೊಡವ, ಗೌಡ ಎಂಬ ಜಾತಿ ಭೇದ ಮರೆತು ಬಿ.ಜೆ.ಪಿ. ಗೆಲುವೆ ಗುರಿಯಾಗಬೇಕು ಎಂದರು.

ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕಾಂಗ್ರೆಸ್ ಸರಕಾರವನ್ನು ದಮನ ಮಾಡಲು ಕಾರ್ಯಕರ್ತರುಗಳು ದಂಡೆತ್ತಿ ಹೋಗಬೇಕಾಗಿದೆ. ಇದೊಂದು ಯುದ್ದ ಎಂದು ಮನವರಿಕೆ ಮಾಡಿ ಕೊಂಡು ಬಿ.ಜೆ.ಪಿ. ಸರಕಾರವನ್ನು ಆಡಳಿತಕ್ಕೆ ತರಲು ಶ್ರಮವಹಿಸಬೇಕು ಎಂದು ಹೇಳಿದರು.

ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ಪರಿಸರವಾದಿಗಳಿಂದ ಕೊಡಗಿನಲ್ಲಿ ಆತಂಕ ಹೆಚ್ಚಾಗಿದೆ. ಪರಿಸರದ ನೆಪದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ತೊಡಕು ಉಂಟುಮಾಡುತ್ತಿದ್ದಾರೆ. ಕೊಡಗಿನ ಬೆಳೆಗಾರರಿಗೆ, ರೈತರಿಗೆ ಮಾರಕವಾಗುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಧ್ವನಿ ಎತ್ತುವದು ಸರಿಯಲ್ಲ. ಆರ್.ಎಂ.ಸಿ.ಯಲ್ಲಿ ಕಾಳುಮೆಣಸು ಕಲಬೆರಕೆ ಎಂಬ ನೆಪದಲ್ಲಿ ಹೋರಾಡುವ ಕಾಂಗ್ರೆಸ್‍ಗೆ ಕಲಬೆರಕೆ ನಿಯಂತ್ರಣ ಕಾಯ್ದೆ ಅನ್ವಯ ವ್ಯಾಪಾರಿಯ ವಿರುದ್ದ ದೂರು ದಾಖಲಿಸಬಹುದು ಎಂಬ ಕನಿಷ್ಟ ಜ್ಞಾನವೂ ಇಲ್ಲ ಎಂದು ಟೀಕಿಸಿದರು.

ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಹಗರಣದ ಸರಕಾರವನ್ನು ಕಿತ್ತೊಗೆದು ರಾಜ್ಯದಲ್ಲಿ ಜನರ, ರೈತರ, ಯುವಕರ ಅಭಿವೃದ್ದಿಗಾಗಿ ಬಿ.ಜೆ.ಪಿ. ಸರಕಾರವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.

ತಾಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ಭಾರತೀಯ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚ ಅಧ್ಯಕ್ಷೆ ಯಮುನಾ, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ವೀರಾಜಪೇಟೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜೀವನ್, ತಾಲೂಕು ಮಂಡಲ ಕಾರ್ಯದರ್ಶಿ ಲಾಲಾ ಭೀಮಯ್ಯ, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಯುವಮೋರ್ಚ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ತಾಲೂಕು ಮಹಿಳಾ ಮೋರ್ಚ ಅಧ್ಯಕ್ಷೆ ಸುಮಿ ಸುಬ್ಬಯ್ಯ, ಉಪಾಧ್ಯಕ್ಷೆ ರತಿ ಅಚ್ಚಪ್ಪ, ಜಿ.ಪಂ. ಸದಸ್ಯರುಗಳಾದ ಅಪ್ಪಡೇರಂಡ ಭವ್ಯ, ಮುಕೋಂಡ ವಿಜು ಸುಬ್ರಮಣಿ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಕೊಡಂದೇರ ಬಾಂಡ್ ಗಣಪತಿ ಉಪಸ್ಥಿತರಿದ್ದರು.

-ಎನ್.ಎನ್. ದಿನೇಶ್