ಶನಿವಾರಸಂತೆ, ಸೆ. 18: ಶನಿವಾರಸಂತೆ ಹೋಬಳಿಯ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ವತಿಯಿಂದ ಬೆಳೆಗಾರರೆಲ್ಲರೂ ಒಂದುಗೂಡಿ ಕಾಫಿ ತೋಟಗಳಲ್ಲಿ ಶಂಕು ಹುಳುಗಳ ನಾಶಕ್ಕಾಗಿ ಸ್ವಪ್ರೇರಣೆಯಿಂದ ದೇಣಿಗೆ ನೀಡುವ ಮೂಲಕ ‘ಹಿಡಿಕೊಲ್ಲು’ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಕೆರಳ್ಳಿ ಹಾಗೂ ಹುಲುಸೆ ಗ್ರಾಮಗಳ ಸುಮಾರು 300 ಎಕರೆ ತೋಟಗಳಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಬೆಳೆಗಾರರು ಕೂಲಿ ಕಾರ್ಮಿಕರ ಜತೆ ಸೇರಿ ಸಾಂಕೇತಿಕವಾಗಿ ಹುಳುಗಳನ್ನು ಹಿಡಿದು ಸಂಗ್ರಹಿಸಿದರು. ಹಾಕಿದ ಔಷಧಿ ತಿನ್ನಲು ಗುಂಪುಗೂಡಿ ಬಂದ ಶಂಕುಹುಳುಗಳನ್ನು ಬಕೆಟ್‍ಗಳಲ್ಲಿ ಸಂಗ್ರಹಿಸಿ ಚೀಲಗಳಲ್ಲಿ ತುಂಬಿಸಲಾಯಿತು. ಸಂಜೆ ವೇಳೆಗೆ 4-5 ಟನ್ ಹುಳುಗಳನ್ನು ಸಂಗ್ರಹಿಸಲಾಯಿತು. ಸಂಘದ ಪದಾಧಿಕಾರಿಗಳು, ಬೆಳೆಗಾರರು ಕಾರ್ಮಿಕರ ಸಹಕಾರದೊಂದಿಗೆ ಹುಳುಗಳು ತುಂಬಿದ ಚೀಲಗಳನ್ನು ದೂರದಲ್ಲಿ ಗುಂಡಿ ತೆಗೆದು ಕ್ರಿಮಿನಾಶಕದೊಂದಿಗೆ ಸುರಿದು ನಾಶಪಡಿಸಿದರು.

ಸರಕಾರವಾಗಲೀ ಜನಪ್ರತಿನಿಧಿಗಳಾಗಲಿ ಸಹಾಯ- ಸಹಕಾರ ನೀಡದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ತೋಟ ಮಾಲೀಕರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಬೆಳೆಗಾರರ ಸ್ವಸಹಾಯ ಸಂಘ 1 ಕೆ.ಜಿ. ಹುಳುಗಳಿಗೆ ರೂ. 4ರಂತೆ ನೀಡಿ ಕೂಲಿಕಾರ್ಮಿಕರಿಗೆ ಕೊಡುವ ನಿತ್ಯದ ಸಂಬಳ ಹೆಚ್ಚಿಸಲಾಯಿತು. ‘ಹಿಡಿಕೊಲ್ಲು’ ಕಾರ್ಯಕ್ರಮದಿಂದ ಶನಿವಾರಸಂತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೂ. 10 ಸಾವಿರ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ ರೂ. 10 ಸಾವಿರ, ಬೆಳೆಗಾರರ ಸಂಘದಿಂದ ರೂ. 25 ಸಾವಿರ ಹಾಗೂ ಇತರೆ ರೂ. 5 ಸಾವಿರದಂತೆ ಒಟ್ಟು ರೂ. 50 ಸಾವಿರ ಸಂಗ್ರಹವಾಗಿದ್ದು, ಜನಪ್ರತಿನಿಧಿಗಳು ಕೊಡುವದಾಗಿ ಭರವಸೆ ನೀಡಿದ್ದ ರೂ. 10 ಲಕ್ಷದ ನಿರೀಕ್ಷೆಯಲ್ಲಿ ಸಂಘದ ಪದಾಧಿಕಾರಿಗಳಿದ್ದಾರೆ.

ಕೂಲಿ ಕಾರ್ಮಿಕರು ಹುಳ ಹಿಡಿಯಲು ಹಿಂಜರಿಯುತ್ತಿದ್ದಾರೆ. ಈ ಕಾರ್ಯಕ್ರಮ 1 ವರ್ಷ ನಿರಂತರವಾಗಿ ಸಾಮೂಹಿಕವಾಗಿ ನಡೆದರೆ ಹುಳುಗಳು ಸಂಪೂರ್ಣ ನಾಶ ಸಾಧ್ಯ ಎನ್ನುತ್ತಾರೆ ಬೆಳೆಗಾರರು.

ಸೋಮವಾರ ನಡೆದ ಮೊದಲ ಹಂತದ ‘ಹಿಡಿಕೊಲ್ಲು’ ಸಾಂಕೇತಿಕ ಹೋರಾಟದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಬೆಳೆಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಆ.ಡಿ. ಲಕ್ಷ್ಮಣ, ಉಪಾಧ್ಯಕ್ಷ ಎಸ್.ಸಿ. ಶರತ್‍ಶೇಖರ್, ಹೆಚ್.ಎ. ದಿವಾಕರ್, ನಿರ್ದೇಶಕರಾದ ರಂಗಸ್ವಾಮಿ, ಪುಟ್ಟಸ್ವಾಮಿ, ಬಿ.ಎಸ್. ಪವನ್, ಎಸ್.ಜೆ. ರವಿಕುಮಾರ್, ವರ್ತಕರ ಸಂಘದ ಅಧ್ಯಕ್ಷ ಪ್ರತಾಪ್, ಬೆಳೆಗಾರರಾದ ಶಿವಶೇಖರ್, ಪ್ರದೀಪ್, ಕಾಂತರಾಜ್, ಹೆಚ್.ಸಿ. ರವಿಕುಮಾರ್ ನೇತೃತ್ವ ವಹಿಸಿದ್ದರು.