ಮಡಿಕೇರಿ, ಸೆ. 18: ಕಾಫಿ, ಚಹ, ರಬ್ಬರ್ ಮತ್ತು ಇತರ ಪ್ಲಾಂಟೇಷನ್ ಹಾಗೂ ಸಂಬಾರ ಬೆಳೆಗಳು ದಕ್ಷಿಣ ಭಾರತದಲ್ಲಿ ಪರಿಸರ ಸ್ನೇಹಿ ವಾತಾವರಣವನ್ನು ಮತ್ತು ಪಶ್ಚಿಮ ಘಟ್ಟಗಳ ರಕ್ಷಣೆಯನ್ನು ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ಲಾಂಟೇಷನ್ ಬೆಳೆಗಳ ಮತ್ತು ಬೆಳೆಗಾರರ ಸಮಗ್ರ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮುಂದಾಗಬೇಕೆಂದು ಉಪಾಸಿ ಅಧ್ಯಕ್ಷ ಡಿ. ವಿನೋದ್ ಶಿವಪ್ಪ ಮನವಿ ಮಾಡಿದ್ದಾರೆ.

ಇತ್ತೀಚೆಗೆ ತಮಿಳುನಾಡಿನ ಕೂನೂರಿನಲ್ಲಿರುವ ಗ್ಲೆನ್ ವ್ಯೂನಲ್ಲಿ ನಡೆದ ಉಪಾಸಿ ಸಂಸ್ಥೆಯ 124ನೇ ವಾರ್ಷಿಕ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಪ್ಲಾಂಟೇಷನ್ ಬೆಳೆಗಳ ಕೃಷಿಯಲ್ಲಿ ಸಾಕಷ್ಟು ಎಡರುತೊಡರುಗಳಿದ್ದು ಯಾಂತೀಕೃತ ಬೇಸಾಯಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನೋಟು ಅಮಾನ್ಯಕರಣ, ಹವಾಮಾನ ವೈಪರಿತ್ಯ, ಬೆಳೆಗಳ ಬೆಲೆಯ ಅನಿರೀಕ್ಷಿತ ಮತ್ತು ಅಸಾಧಾರಣ ಏರಿಳಿತಗಳ ಹಿನ್ನೆಲೆಯಲ್ಲಿ ಉಪಾಸಿ ವತಿಯಿಂದ ಸಂಬಂಧಿತ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರಗಳ ಜೊತೆಯಲ್ಲಿ ಯಾವ ರೀತಿ ಸಹಾಯ ಮತ್ತು ಸೌಕರ್ಯಗಳನ್ನು ಪಡೆಯ ಬಹುದೆಂದು ಪ್ರಾಮಾಣಿಕವಾದ ಪ್ರಯತ್ನವನ್ನು ಸಂಸ್ಥೆಯ ವತಿಯಿಂದ ಮಾಡಲಾಗಿದೆ ಎಂದರು.

ಪ್ಲಾಂಟೇಷನ್ ಕ್ಷೇತ್ರದಲ್ಲಿ ಈಗಲೂ ಕಾರ್ಮಿಕರ ಸಹಕಾರದಿಂದ ಕೆಲಸಗಳು ನಡೆಯುತ್ತಿದ್ದು ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರೇ ಇದ್ದಾರೆ. ಪ್ರಸ್ತುತ ಪ್ಲಾಂಟೇಷನ್ ಕ್ಷೇತ್ರದಲ್ಲಿ 24.16 ಲಕ್ಷ ಜನ ನೇರ ಉದ್ಯೋಗದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ಒಟ್ಟು 18.95 ಲಕ್ಷ ಹೆಕ್ಟೇರ್ ಪ್ಲಾಂಟೇಷನ್ ಅಂದರೆ ಟೀ, ಕಾಫಿ, ರಬ್ಬರ್ ಹಾಗೂ ಏಲಕ್ಕಿ ಕೃಷಿಯ ಪೈಕಿ 11.47 ಲಕ್ಷ ಹೆಕ್ಟೇರ್‍ಗಳು ದಕ್ಷಿಣ ಭಾರತದಲ್ಲಿದೆ. 2016-17ರಲ್ಲಿ ಪ್ಲಾಂಟೇಷನ್ ಬೆಳೆಗಳ ಒಟ್ಟು ಮೌಲ್ಯ ರೂ. 44,581 ಕೋಟಿ ಆಗಿದ್ದು, ಇದು ದೇಶದ ಕೃಷಿ ಉತ್ಪನ್ನದ ಶೇ. 1.67 ಆಗಿರುತ್ತದೆ. ಹಾಗೆಯೇ 2015-16ರಲ್ಲಿ 12,123 ಕೋಟಿ ರೂ. ಮೌಲ್ಯದ ಪ್ಲಾಂಟೇಷನ್ ಉತ್ಪನ್ನಗಳು ರಫ್ತಾಗಿದ್ದು, ಇದು ಒಟ್ಟು ಕೃಷಿ ಆದಾಯದ ಶೇ. 5.32 ಆಗಿದೆ ಎಂದು ವಿನೋದ್ ಶಿವಪ್ಪ ವಿವರಿಸಿದರು. ಹಾಗೆಯೇ ಪ್ಲಾಂಟೇಷನ್ ಕ್ಷೇತ್ರದ ಮೇಲೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ಹಿಡಿತವು ವಿವಿಧ ಕಾನೂನು ಮತ್ತು ಕಾಯಿದೆಗಳ ಮೂಲಕ ಆಗುತ್ತಿದ್ದು, ಈ ಬಗ್ಗೆ ಸರಕಾರಗಳು ಮರು ಚಿಂತನೆ ನಡೆಸಬೇಕಾಗಿದ್ದು ಪ್ಲಾಂಟೇಷನ್ ಉದ್ಯಮವನ್ನು ಹೆಚ್ಚು ಮಂದಿ ಆಕರ್ಷಣೆ ಹೊಂದುವ ನಿಟ್ಟಿನಲ್ಲಿ ಜನಸ್ನೇಹಿ ವ್ಯವಸ್ಥೆಯನ್ನು ಮತ್ತು ಸುಲಲಿತವಾಗಿ ಸೂಕ್ತ ದರ ದೊರಕುವ ನಿಟ್ಟಿನಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಬೇಕಾದ ವ್ಯವಸ್ಥೆ ಆಗಬೇಕಿದೆ ಎಂದು ಅವರು ಅಭಿಪ್ರಾಯಿಸಿದರು.

ಕೇಂದ್ರ ಸರಕಾರ ಏಕರೂಪದ ಕನಿಷ್ಟ ದಿನಗೂಲಿ ದರವನ್ನು ಜಾರಿಗೊಳಿಸಲು ಪ್ರಕ್ರಿಯೆ ಆರಂಭಿಸಿದೆ. ಆದರೆ, ವಿವಿಧ ರಾಜ್ಯಗಳು ವಿವಿಧ ರೀತಿಯ ಭೌಗೋಳಿಕ ಪ್ರದೇಶಗಳನ್ನು ಹೊಂದಿದ್ದು ರಾಜ್ಯ ಸರಕಾರಗಳು ನಿಗದಿಗೊಳಿಸಬೇಕಾದ ಕನಿಷ್ಟ ದಿನಗೂಲಿ ದರವನ್ನು ಕೇಂದ್ರ ಸರಕಾರ ಯಾವ ಮಾನದಂಡ ಅಡಿಯಲ್ಲಿ ನಿಗದಿ ಮಾಡಿರುತ್ತದೆ ಎಂದು ಪ್ರಶ್ನಿಸಿದ ಅವರು, ಇಂತಹ ತೀರ್ಮಾನಗಳನ್ನು ಅವಸರದಲ್ಲಿ ತೆಗೆದುಕೊಳ್ಳುವ ಬದಲು ಪ್ರಾದೇಶಿಕ ನೆಲೆಗಟ್ಟಿನಲ್ಲಿ ಬೆಳೆಗಾರ ಪ್ರಮುಖರು ಮತ್ತು ಸಂಘ-ಸಂಸ್ಥೆಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ನುಡಿದರು. ಈಗಾಗಲೇ ಬೋನಸ್ ತಿದ್ದುಪಡಿ ಕಾಯ್ದೆ 2015ನ್ನು ಅವಸರವಸರವಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಹೈಕೋರ್ಟ್‍ಗಳಲ್ಲಿ ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದೆಲ್ಲವೂ ಈಗ ಸುಪ್ರಿಂ ಕೋರ್ಟ್ ಮುಂದಿದೆ ಎಂದು ಅವರು ತಿಳಿಸಿದರು.

ಪ್ಲಾಂಟೇಷನ್ ಕಾರ್ಮಿಕರ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸದ ಕುರಿತು ಸರಕಾರ ಹೆಚ್ಚಿನ ಸಹಕಾರ ನೀಡಬೇಕೆಂದು ಅವರು ಆಗ್ರಹಿಸಿದರು. ಈಗಾಗಲೇ ಪ್ಲಾಂಟೇಷನ್ ಬೆಳೆಗಳ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುರಿತು ಕೇಂದ್ರ ಸರಕಾರ ನೀತಿ ನಿಯಮಾವಳಿಗಳನ್ನು ಸಡಿಲಿಸಿದ್ದು ರಿಸರ್ವ್ ಬ್ಯಾಕ್ ಆಫ್ ಇಂಡಿಯಾ ಅನುಮತಿ ಮೂಲಕ ಈಗಾಗಲೇ ಟೀ ಕೃಷಿಯಲ್ಲಿ ವಿದೇಶಿ ಬಂಡವಾಳ ಹೂಡಲು ದಾರಿ ಮಾಡಿಕೊಟ್ಟಿದೆ. ಆದರೆ, ಅಡಿಕೆ ಮತ್ತು ಕೆಲವು ಸಾಂಬಾರ ಪದಾರ್ಥಗಳ ಕೃಷಿಯಲ್ಲಿ ವಿದೇಶಿ ಹೂಡಿಕೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ ಅವರು, ಈ ರೀತಿಯ ತಾರತಮ್ಯ ನೀತಿಯನ್ನು ಕೈಬಿಟ್ಟು ಏಕರೂಪ ನಿಯಮಾವಳಿಗಳನ್ನು ಜಾರಿಗೆ ತರಬೇಕೆಂದು ಕೋರಿದರು.