ವೀರಾಜಪೇಟೆ, ಸೆ. 18: ಭಾಷೆಯ ಬೆಳವಣಿಗೆಯ ಮೂಲಕ ದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ವಿದ್ಯಾರ್ಥಿ ಬಳಗ ಏರ್ಪಡಿಸಿದ್ದ ‘ನುಡಿ ಲಹರಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಆಶೀರ್ವಚನ ನೀಡಿ, ಯಾವದೇ ಭಾಷೆಯನ್ನು ಉಪಯೋಗಿಸ ಬೇಕಾದವರು ಅದನ್ನು ಉಪಯೋಗಿಸದೆ ನಿರ್ಲಕ್ಷ್ಯ ಮಾಡಿದಲ್ಲಿ ನಿರ್ಧಿಷ್ಟ ಭಾಷಿಕರು ಸಾಮಾಜಿಕವಾಗಿಯೂ ಶೈಕ್ಷಣಿಕವಾಗಿಯೂ ಶೋಷಣೆಗೆ ಒಳಗಾಗುತ್ತಾರೆ. 12ನೇ ಶತಮಾನದಲ್ಲಿ ವಚನಗಾರರು ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಯನ್ನು ಸಾಧಿಸಿದರು. ಸಾಹಿತ್ಯದ ಮೂಲಕ ಮನುಷ್ಯ ಸಂಬಂಧಗಳನ್ನು ಬೆಸೆಯಬೇಕು ಎಂದರು.

ಮಡಿಕೇರಿಯ ಸರಸ್ವತಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕುಮಾರ್ “ವಚನ ಸಾಹಿತ್ಯದ ತಾತ್ವಿಕತೆ ಮತ್ತು ಪ್ರಸ್ತುತ ಜಗತ್ತು” ಎಂಬ ವಿಷಯವಾಗಿ ಉಪನ್ಯಾಸ ವನ್ನು ನೀಡಿದರು. ವಚನಗಾರರ ನುಡಿಮುತ್ತುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ವಚನಗಾರರ ಚಿಂತನೆಗಳು ಧರ್ಮವನ್ನೂ ಜಾತಿಯನ್ನೂ ಮೀರಿದ್ದವಾಗಿದ್ದವು ಎಂದು ಹೇಳಿದರು.

ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪದವಿ ಕಾಲೇಜು ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಹೆ.ಆರ್. ಅರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಉಪನ್ಯಾಸಕ ರಂಜಿತಾ ಉಪಸ್ಥಿತರಿದ್ದರು. ತುಳಸಿ ನಿರೂಪಿಸಿದರೆ, ಪ್ರಕೃತಿ ಸ್ವಾಗತಿಸಿದರು, ಶರ್ಮಿನಾ ವಂದಿಸಿದರು.