ಮಡಿಕೇರಿ, ಸೆ. 18: ಗೋಣಿಕೊಪ್ಪ ಎ.ಪಿ.ಎಂ.ಸಿ. ಆವರಣದಲ್ಲಿ ನಡೆಯುತ್ತಿರುವ ವಿಯೆಟ್ನಾಂ ಕರಿಮೆಣಸಿನ ವ್ಯವಹಾರದಿಂದ ಕೊಡಗಿನ ರೈತರಿಗೆ ಅನ್ಯಾಯವಾಗಿದ್ದು, ಇದಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ಸಿ.ಪಿ.ಐ.ಎಂ.ನ ಜಿಲ್ಲಾ ಘಟಕ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂನ ಕಾರ್ಯದರ್ಶಿ ಡಾ. ದುರ್ಗಪ್ರಸಾದ್ ಎ.ಪಿ.ಎಂ.ಸಿ. ಆವರಣದಲ್ಲಿ ಕಾನೂನು ಬಾಹಿರವಾಗಿ ಮಳಿಗೆಯೊಂದನ್ನು ಪಡೆದಿರುವ ಸಂಸ್ಥೆಯೊಂದು ವಿಯೆಟ್ನಾಂನಿಂದ ಕರಿಮೆಣಸನ್ನು ಆಮದು ಮಾಡಿಕೊಂಡು ಕೊಡಗಿನ ಕರಿಮೆಣಸನ್ನು ಕಲಬೆರಕೆ ಮಾಡಿ ಮರುಪ್ಯಾಕ್‍ನೊಂದಿಗೆ ವಿದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಟೀಕಿಸಿದರು.

ರೈತರ ಹಿತ ಕಾಯುವದು, ಮಧ್ಯವರ್ತಿಗಳಿಂದ ಮುಕ್ತಗೊಳಿಸುವದು ಮತ್ತು ಬೆಳೆದ ಬೆಳೆಗೆ ನ್ಯಾಯಬದ್ಧ ಬೆಲೆ ನೀಡುವದು ಎ.ಪಿ.ಎಂ.ಸಿ.ಯ ಕರ್ತವ್ಯವಾಗಿದೆ. ಆದರೆ ಗೋಣಿಕೊಪ್ಪಲು ಎ.ಪಿ.ಎಂ.ಸಿ. ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಪಿಎಂಸಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಬಿಜೆಪಿಯಿಂದ ಆಗಿರುವ ತಪ್ಪುಗಳನ್ನು ಬೆಳೆಗಾರರು ತಮ್ಮ ಸಂಘಟಿತ ಶಕ್ತಿಯೊಂದಿಗೆ ಹೋರಾಟ ನಡೆಸುವ ಮೂಲಕ ಪ್ರಶ್ನಿಸಬೇಕೆಂದು ಮನವಿ ಮಾಡಿದ ಅವರು, ಬೆಳೆಗಾರರ ಹೋರಾಟಕ್ಕೆ ಪಕ್ಷ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಎ.ಸಿ. ಸಾಬು ಹಾಗೂ ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು.