ಮಡಿಕೇರಿ, ಸೆ. 18: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಆಶಾದಾಯಕ ಮುಂಗಾರು ಮಳೆ ಆರಂಭಗೊಂಡಿತ್ತು. ಈ ನಡುವೆ ಜೂನ್ ಹಾಗೂ ಜುಲೈನಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದ್ದರೂ, ಆ ಬಳಿಕ ಉತ್ತಮ ಮಡಿಕೇರಿ, ಸೆ. 18: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಆಶಾದಾಯಕ ಮುಂಗಾರು ಮಳೆ ಆರಂಭಗೊಂಡಿತ್ತು. ಈ ನಡುವೆ ಜೂನ್ ಹಾಗೂ ಜುಲೈನಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದ್ದರೂ, ಆ ಬಳಿಕ ಉತ್ತಮ ಇನ್ನು ಜಿಲ್ಲಾ ಕೇಂದ್ರ ಮಡಿಕೇರಿಗೆ ಈ ಸಾಲಿನಲ್ಲಿ 120 ಇಂಚು ಮಳೆಯಾಗಿದ್ದರೆ, ಕಾವೇರಿ ಉಗಮ ಸ್ಥಳ ತಲಕಾವೇರಿಗೆ ಇದುವರೆಗೆ 200 ಇಂಚು ಮಳೆ ದಾಖಲಾಗಿದೆ. ಗ್ರಾಮೀಣ ಭಾಗ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಹಮ್ಮಿಯಾಲ, ಮುಟ್ಲು ಸುತ್ತಮುತ್ತ 218 ಇಂಚು ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಈ ವರ್ಷಾರಂಭದಿಂದ ಇಂದಿನ ತನಕ 108.73 ಇಂಚು ಮಳೆ ಸರಾಸರಿ ದಾಖಲಾಗಿದ್ದು,

(ಮೊದಲ ಪುಟದಿಂದ) ಕಳೆ ವರ್ಷ ಇದೇ ಅವಧಿಗೆ 95.45 ಇಂಚು ದಾಖಲಾಗಿತ್ತು. ಈ ಬಾರಿ 12.78 ಇಂಚು ಅಧಿಕ ಮಳೆಯಾಗಿದೆ.

ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಸರಾಸರಿ 61.77 ಇಂಚು ಮಳೆಯಾದರೆ, ಹಿಂದಿನ ವರ್ಷ ಇದೇ ಸಮಯಕ್ಕೆ 45.59 ಇಂಚು ಮಳೆಯೊಂದಿಗೆ, ಈ ಸಲ 16.18 ಇಂಚು ಅಧಿಕ ದಾಖಲಾಗಿದೆ.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಈ ವರ್ಷಾರಂಭದಿಂದ ಇಂದಿನ ತನಕ ಸರಾಸರಿ 60 ಇಂಚು ಮಳೆಯಾಗಿದ್ದು, ಹಿಂದಿನ ಸಾಲಿನಲ್ಲಿ ಇದೇ ಅವಧಿಗೆ 48.94 ಇಂಚು ಮಳೆಯೊಂದಿಗೆ ಪ್ರಸಕ್ತ 11.08 ಇಂಚು ಅಧಿಕ ಮಳೆಯಾಗಿದೆ.

ಕೊಡಗು ಜಿಲ್ಲೆಯ ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳಲ್ಲಿ ಈಗ ಬೀಳುತ್ತಿರುವ ಮಳೆಯ ಪರಿಣಾಮ ಬರಗಾಲದ ಛಾಯೆ ದೂರವಾಗತೊಡಗಿದೆ. ಬದಲಾಗಿ ಕಾಫಿ, ಒಳ್ಳೆಮೆಣಸು ಶುಂಠಿ ಕೃಷಿಯ ಮೇಲೆ ವ್ಯತ್ತಿರಿಕ್ತ ಪರಿಣಾಮ ಉಂಟಾಗುತ್ತಿರುವ ಬಗ್ಗೆ ಕೃಷಿಕರು, ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷಿ ಪ್ರಗತಿ : ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯದಲ್ಲಿ ಪ್ರಗತಿ ನೋಟ ಹೀಗಿದೆ. ಮಡಿಕೇರಿ ತಾಲೂಕಿನಲ್ಲಿ 5600 ಹೆಕ್ಟೇರ್‍ನಲ್ಲಿ ನಾಟಿ ಕೆಲಸ ಪೂರ್ಣಗೊಂಡಿದೆ. ಈ ತಾಲೂಕಿನಲ್ಲಿ 6500 ಹೆಕ್ಟೇರ್ ಗುರಿ ಹೊಂದಲಾಗಿದೆ.

ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.

ಸೋಮವಾರಪೇಟೆ : ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಳೆದೆರಡು ದಿನಗಳಿಂದ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಜೂನ್ ಜುಲೈ ತಿಂಗಳಿನಲ್ಲಿ ಮಾಯವಾಗಿದ್ದ ಗಾಳಿಯ ಆರ್ಭಟ ಇತ್ತೀಚಿನ ಎರಡು ದಿನಗಳಲ್ಲಿ ಕಂಡುಬರುತ್ತಿದೆ.

ತಾಲೂಕಿನ ಪುಷ್ಟಗಿರಿ ಬೆಟ್ಟಶ್ರೇಣಿಯ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಟ್ಟದಳ್ಳಿ, ಹಂಚಿನಳ್ಳಿ, ಶಾಂತಳ್ಳಿ, ಕುಂದಳ್ಳಿ, ತೋಳೂರುಶೆಟ್ಟಳ್ಳಿ, ಸೂರ್ಲಬ್ಬಿ, ಕುಂಬಾರಗಡಿಗೆ ಭಾಗದಲ್ಲೂ ಮಳೆ ಬೀಳುತ್ತಿರುವ ಹಿನ್ನೆಲೆ ಕಾಫಿಗೆ ಕೊಳೆ ರೋಗ ಬಾಧಿಸುವ ಭೀತಿ ಎದುರಾಗಿದೆ. ಇದರೊಂದಿಗೆ ಕರಿಮೆಣಸು ಕೆಲವೆಡೆ ಕಾಳು ಕಟ್ಟಿದ್ದು, ಹಲವು ಪ್ರದೇಶದಲ್ಲಿ ಈಗಷ್ಟೇ ಗೆರೆ ಮೂಡುತ್ತಿರುವದರಿಂದ ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಳೆಯ ಆರ್ಭಟಕ್ಕೆ ಗ್ರಾಮೀಣ ಭಾಗದ ರಸ್ತೆಗಳಲ್ಲಿರುವ ಗುಂಡಿಯಲ್ಲಿ ನೀರು ಶೇಖರಣೆಗೊಳ್ಳುತ್ತಿದ್ದು, ವಾಹನ-ಜನ ಸಂಚಾರಕ್ಕೆ ತೊಡಕಾಗುತ್ತಿದೆ. ಸಂತೆ ದಿನವಾದ ಸೋಮವಾರದಂದು ನಿರಂತರ ಮಳೆ ಸುರಿದ ಪರಿಣಾಮ ಪಟ್ಟಣದಲ್ಲಿ ಜನಸಂಚಾರವೂ ಇಳಿಕೆಯಾಗಿತ್ತು.

ಸಂತೆ ಮಾರುಕಟ್ಟೆಯ ಒಳಗೆ ಮಳೆ ನೀರು ಜಿನುಗುತ್ತಿದ್ದುದರಿಂದ ವ್ಯಾಪಾರ ವಹಿವಾಟಿಗೂ ತೊಡಕಾಗಿ ಪರಿಣಮಿಸಿತು. ಹೈಟೆಕ್ ಮಾರುಕಟ್ಟೆಯ ಛಾವಣಿಗೆ ಟಾರ್ಪಲ್‍ಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡಬೇಕಾಯಿತು.

* ಗೋಣಿಕೊಪ್ಪಲು: ರಭಸದ ಗಾಳಿಯೊಂದಿಗೆ ಆರಂಭಗೊಂಡ ಮಳೆ ಎರಡು ದಿನಗಳ ಕಾಲ ಗೋಣಿಕೊಪ್ಪಲು ಸುತ್ತಮುತ್ತ ಧಾರಾಕಾರವಾಗಿ ಸುರಿಯಿತು. ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದವು. ಗೋಣಿಕೊಪ್ಪಲಿನ ಕೀರೆಹೊಳೆ ಮೈದುಂಬಿದರೆ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯಿತು.

ಭಾನುವಾರ ನಿರಂತರವಾಗಿ ಬಿದ್ದ ಮಳೆಗೆ ತೊರೆತೋಡುಗಳು ತುಂಬಿದ್ದವು. ಸೋಮವಾರ ಮತ್ತೆ ರಭಸವಾಗಿ ಬಿದ್ದ ಮಳೆಗೆ ಹಳ್ಳಕೊಳ್ಳಗಳ ನೀರು ಮತ್ತಷ್ಟು ಹೆಚ್ಚಾಯಿತು. ಕೆಲವು ಕಡೆ ರಸ್ತೆ ಮೇಲೆಲ್ಲ ನೀರು ಹರಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಇದರಿಂದ ತಹಶೀಲ್ದಾರ್ ಗೋವಿಂದರಾಜು ಸೋಮವಾರ ಬೆಳಿಗ್ಗೆ ವೀರಾಜಪೇಟೆ ತಾಲೂಕಿನಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದರು.

ಮನೆಗಳಿಗೆ ನೀರು: ತಿತಿಮತಿ ಸಮೀಪದ ಮಾವಕಲ್ ಅರಣ್ಯದ ಆನೆ ಕಂದಕಗÀಳಲ್ಲಿ ನೀರು ತುಂಬಿ ಹಾಡಿಗಳ ಗುಡಿಸಿಲಿನೊಳಗೆ ಹರಿಯಿತು. ದೇವಮಚ್ಚಿ, ರೇಷ್ಮೆಹಡ್ಲುಗಿರಿಜನ ಹಾಡಿಯ ಮನೆಗಳಿಗೆ ಅರಣ್ಯದಂಚಿನ ಕಂದಕಗಳ ನೀರು ಏರಿ ಒಡೆದು ಹಾಡಿ ರಸ್ತೆ ಮೇಲೆ ಹರಿಯಿತು. ಇದರಿಂದ ಹಾಡಿಯಲ್ಲಿರುವ ಸರಕಾರಿ ಶಾಲೆ, ಅಂಗನವಾಡಿಗಳಿಗೆ ವಿದ್ಯಾರ್ಥಿಗಳು ಬರಲು ಅಡಚಣೆಯಾಯಿತು. ಅಷ್ಟರಲ್ಲಿ ಶಾಲೆಗಳಿಗೆ ರಜೆ ಘೋಷಣೆಯಾದುದರಿಂದ ಹೆಚ್ಚಿನ ಸಮಸ್ಯೆ ಉಂಟಾಗಲಿಲ್ಲ. ಆದರೆ ಅಂಗನವಾಡಿ ಹಾಗೂ ಹಾಡಿಗಳ ಅನೇಕ ಮನೆಗಳಿಗೆ ನೀರು ನುಗ್ಗಿ ಆತಂಕ ಉಂಟುಮಾಡಿತು.

ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನುಗುಂದ ಹಾಗೂ ಸಿಬ್ಬಂದಿ ಆಗಮಿಸಿ ಮನೆಗಳತ್ತ ನುಗ್ಗುತ್ತಿದ್ದ ನೀರನ್ನು ತಡೆಗಟ್ಟಿದರು.

ಸಮುದ್ರ ದೃಶ್ಯ : ಅಮ್ಮತ್ತಿ, ಗೋಣಿಕೊಪ್ಪಲು ಕಿರುಗೂರು ಮಾರ್ಗವಾಗಿ ಹರಿಯುವ ಕೀರೆಹೊಳೆ ವೈಭವ ಕಣ್ಮನ ತಣಿಸಿತು. ನೀರೇ ಇಲ್ಲದೆ ಕಸಕಡ್ಡಿಗಳನ್ನು ಒಡಲಲ್ಲಿ ತುಂಬಿಸಿಕೊಂಡಿದ್ದ ಹೊಳೆ ನೋಡುಗರಿಗೆ ಬೇಸರ ತರಿಸುತ್ತಿತ್ತು. ಆದರೆ ಸೋಮವಾರ ಸುರಿದ ಮಳೆಗೆ ಕಸಕಡ್ಡಿಗಳು ಮಾಯವಾಗಿ ನದಿ ಗಜಗಾಂಭೀರ್ಯದಿಂದ ಹರಿಯಿತು. ಕುಂದ, ಪೊನ್ನಂಪೇಟೆ ನಡುವಿನ ತೊರೆ ತುಂಬಿ ಹರಿಯಿತು. ಬೇಗೂರು, ಪೊನ್ನಂಪೇಟೆ ನಡುವಿನ ಕೊಲ್ಲಿಯಲ್ಲಿ ನೀರು ಸಮುದ್ರದಂತೆ ತುಂಬಿತ್ತು.

ಕಿರುಗೂರು ಬಳಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕೆಳಗಿನ ದೃಶ್ಯ ಮನಮೋಹಕವಾಗಿತ್ತು. ಕೃಷಿ ಭೂಮಿಗೆ ನೀರೊದಗಿಸಲು ನಿರ್ಮಿಸಿರುವ ಪಿಕಾಪ್‍ದಿಂದ ಧುಮ್ಮಿಕ್ಕುತ್ತಿದ್ದ ನೀರಿನ ರಭಸಕ್ಕೆ ಸೇತುವೆಯೇ ಅದುರುತ್ತಿತ್ತು. ಹುದಿಕೇರಿ, ಶ್ರೀಮಂಗಲ, ಬಿ.ಶೆಟ್ಟಿಗೇರಿ, ಕುಂದ, ಭಾಗಗಳಿಗೂ ಉತ್ತಮ ಮಳೆಯಾಗಿದೆ. ಆ ಭಾಗದ ತೊರೆ ತೋಡುಗಳಲ್ಲಿ ಜೀವ ಕಳೆ ತುಂಬಿತ್ತು. ಸೋಮವಾರ ಬೆಳಿಗ್ಗೆ 10 ಗಂಟೆಯ ಬಳಿಕ ಮಳೆ ತುಸು ಕಡಿಮೆಯಾಯಿತು.

ಕತ್ತಲೆಯಲ್ಲಿ ಹಳ್ಳಿಗಳು: ಮಳೆ ಭತ್ತದ ಗದ್ದೆಗಳಿಗೆ ಸಹಕಾರಿಯಾದರೆ ಕಾಫಿಗೆ ತುಸು ಅಪಾಯ ತಂದಿತು. ಹೆಚ್ಚು ಮಳೆ ಬಿದ್ದರೆ ಗಿಡದ ಕಾಫಿ ಉದುರುವ ಸಂ¨ವವಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದರು. ಭಾನುವಾರ ಸಂಜೆ ಬೀಸಿದ ಗಾಳಿಗೆ ಗೋಣಿಕೊಪ್ಪಲು ಪಟ್ಟಣದ ಕೆಲವು ಅಂಗಡಿ ಮುಂಗಟ್ಟುಗಳ ನಾಮಫಲಕ ಕೆಳಕ್ಕುರುಳಿದವು. ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಆದರೆ ತಿತಿಮತಿ, ಪೊನ್ನಂಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಹುದಿಕೇರಿ ಸೇರಿದಂತೆ ಹತ್ತಾರು ಹಳ್ಳಿಗಳು ವಿದ್ಯುತ್ ಕಡಿತದಿಂದಾಗಿ ಭಾನುವಾರ ಸಂಜೆಯಿಂದ ಕತ್ತಲಲ್ಲಿ ಮುಳುಗಿವೆ.

ನಾಟಿ ಗದ್ದೆ ಜಲಾವೃತ

ವೀರಾಜಪೇಟೆ : ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೆದಮುಳ್ಳೂರು ಗ್ರಾಮದಲ್ಲಿ ನಾಟಿ ಮಾಡಿದ ಗದ್ದೆ ಜಲಾವೃತ್ತಗೊಂಡಿದೆ. ನಾಟಿ ಮಾಡಿದ ಸಸಿ ನೀರಿನಲ್ಲಿ ಮುಳುಗಿರುವದರಿಂದ ಕೊಳೆಯುವ ಪರಿಸ್ಥಿತಿಯಲ್ಲಿದೆ. ಅರಮೇರಿ ಮೈತಾಡಿ, ಕದನೂರು ಗ್ರಾಮಗಳಲ್ಲಿಯೂ ಗದ್ದೆಗಳು ನೀರಿನಿಂದ ಜಲಾವೃತಗೊಂಡು ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ನಿನ್ನೆ ದಿನದ ರಾತ್ರಿ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಪಟ್ಟಣದಲ್ಲಿ ರಾತ್ರಿ ಕಾರ್ಗತ್ತಲು ಆವರಿಸಿತ್ತು.

ಸೆಸ್ಕಾಂ ಅಧಿಕಾರಿಗಳ ಪ್ರಕಾರ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗದ್ದೆ ಹಾಗೂ ಗ್ರಾಮಾಂತರ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕಂಬಗಳ ದುರಸ್ತಿ ಕಾರ್ಯ ಬೆಳಗಿನಿಂದಲೇ ಮುಂದುವರೆದಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ವಾಯು-ವರುಣ ಆರ್ಭಟದಿಂದ ಜನಜೀವನದಲ್ಲಿ ತಲ್ಲಣ ಉಂಟಾಗಿರುವ ದೃಶ್ಯ ಗೋಚರಿಸಿದೆ.

ವರದಿ : ವಿಜಯ್, ಎನ್.ಎನ್. ದಿನೇಶ್, ಡಿ.ಎಂ. ರಾಜ್‍ಕುಮಾರ್, ನರೇಶ್ಚಂದ್ರ