ಮಡಿಕೇರಿ, ಸೆ. 18: ನಗರ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ದಸರಾ ಉತ್ಸವದಲ್ಲಿ ಕಳೆದ ಬಾರಿ ತೃತೀಯ ಬಹುಮಾನ ಪಡೆದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 42ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿರುವದಾಗಿ ಸಮಿತಿಯ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ ತಿಳಿಸಿದ್ದಾರೆ.

ಹಿರಣ್ಯಾಕ್ಷ ವಧೆ-ದೀಪಾವಳಿ ಆಚರಣೆ ಮಹಿಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು, 2 ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದೆ. ದಿಂಡಿಗಲ್‍ನ ಕಳೆಯಗಂ ಎಲೆಕ್ಟ್ರಿಕಲ್ಸ್‍ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಧ್ವನಿವರ್ಧಕ ಹಾಗೂ ಸ್ಟುಡಿಯೋ ವ್ಯವಸ್ಥೆಯನ್ನು ಬೆಂಗಳೂರಿನ ಮಧುರಾ ಸಂಸ್ಥೆಯವರು ಮಾಡಲಿದ್ದಾರೆ. 30 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಟೀಂ ಕೆಎಂಟಿಯ ಕಲಾವಿದ ಸುನಿಲ್ ಮತ್ತು ತಂಡ ಹಾಗೂ ಉದುಬೂರಿನ ಮಹದೇವಪ್ಪ ಅಂಡ್ ಸನ್ಸ್‍ನವರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಫ್ಲಾಟ್‍ಫಾರಂ ನಿರ್ಮಾಣ, ಟ್ರ್ಯಾಕ್ಟರ್

ಸೆಟ್ಟಿಂಗ್ಸ್, ಕಲಾಕೃತಿಗಳಿಗೆ ಚಲನವಲನ ಇವೆಲ್ಲವನ್ನು ಟೀಂ ಕೆಎಂಟಿ ತಂಡದವರು ಮಾಡಲಿದ್ದಾರೆ. ಹೈದರಾಬಾದ್‍ನ 25 ಫೀಟ್ ಹೈಟ್ ಬರ್ನಿಂಗ್ ಲೈಟ್ ಅಂಡ್ ಫೈರ್ ಎಂಬ ನೂತನ ತಂತ್ರಜ್ಞಾನವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು, ರೂ. 16 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದೆ ಎಂದು ಸದಾ ಮುದ್ದಪ್ಪ ಮಾಹಿತಿಯಿತ್ತರು.

ದಸರಾ ಉತ್ಸವಕ್ಕಾಗಿ ಇದುವರೆಗೆ ಸಂಗ್ರಹಿಸಿ ಬಾಕಿ ಉಳಿದ ಚಂದಾ ಹಣದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನವೊಂದನ್ನು ನಿರ್ಮಿಸಲಾಗಿದ್ದು, ಅದನ್ನು ಲೋಕಾರ್ಪಣೆ ಮಾಡುವದರ ಜೊತೆಗೆ ಈ ಬಾರಿ ದಸರಾದಲ್ಲಿ ಪ್ರಥಮ ಬಹುಮಾನವನ್ನು ಪಡೆಯಲು ಶ್ರಮಿಸುತ್ತಿರುವದಾಗಿ ಸದಾ ಮುದ್ದಪ್ಪ ವಿವರಿಸಿದರು. - ಉಜ್ವಲ್‍ರಂಜಿತ್