ಸೋಮವಾರಪೇಟೆ, ಸೆ.18: ಪ್ರಸಕ್ತ ವರ್ಷ ಅದ್ಧೂರಿಯೊಂದಿಗೆ ಅರ್ಥಪೂರ್ಣವಾಗಿ ಆಯುಧ ಪೂಜೋತ್ಸವವನ್ನು ಆಚರಿಸಲು ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಸಿ. ನಂದ ಹೇಳಿದರು.

ತಾ. 29ರಂದು ಆಯುಧ ಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತಯಾರಿ ನಡೆಯುತ್ತಿದ್ದು, ಅಂದು ಬೆಳಿಗ್ಗೆ 7.30 ಗಂಟೆಗೆ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ, 8.30 ಗಂಟೆಗೆ ಇಲ್ಲಿನ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವದು ಎಂದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸುವ ಸಭಾ ಮಂಟಪದಲ್ಲಿ 9 ಗಂಟೆಗೆ ಆಯುಧಾ ಪೂಜಾ ಸಮಾರಂಭಕ್ಕೆ ವಿವಿಧ ಜನಪ್ರತಿನಿಧಿಗಳು ಚಾಲನೆ ನೀಡಲಿದ್ದಾರೆ. 9.30 ಕ್ಕೆ ವಿದ್ಯಾರ್ಥಿಗಳಿಗಾಗಿ ವಿವಿಧ ಹಂತದಲ್ಲಿ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. 5 ಸಾವಿರ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. 4 ಸಾವಿರ ಹಾಗೂ ಟ್ರೋಫಿ, ತೃತೀಯ ಬಹುಮಾನವಾಗಿ ರೂ. 3 ಸಾವಿರ ಹಾಗೂ ಟ್ರೋಫಿಯನ್ನು ನೀಡಲಾಗುವದು. ಭಾಗವಹಿಸುವ ತಂಡಗಳು ತಾ.28ರ ಸಂಜೆ 5 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧಿಸುವ ವಿದ್ಯಾರ್ಥಿಗಳು ಆಯಾ ಶಾಲೆಯ ಮುಖ್ಯ ಶಿಕ್ಷಕರಿಂದ ದೃಢೀಕರಣ ಪತ್ರ ತರುವದು ಕಡ್ಡಾಯ ಎಂದರು.

ಮಧ್ಯಾಹ್ನ 1 ಗಂಟೆಗೆ ಸಾರ್ವ ಜನಿಕರಿಗೆ ಅನ್ನದಾನ ನಡೆಯಲಿದ್ದು ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು. ಆಚರಣೆಯ ಅಂಗವಾಗಿ ವರ್ಕ್‍ಶಾಪ್ ಹಾಗೂ ವಾಹನಗಳ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧಿಗಳು ತಾ. 29ರ ಸಂಜೆ 4 ಗಂಟೆಯೊಳಗೆ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ವಿಜೇತರಿಗೆ ಬಹುಮಾನ ನೀಡಲಾಗುವದಲ್ಲದೆ ಸೂಪರ್ 7 ಆಗಿ ಆಯ್ಕೆಯಾಗುವ ವರಿಗೆ ರೂ. 10 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಗುವದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ ಕೆ.ಎ. ಇಬ್ರಾಹಿಂ, ಸಂಘದ ಸದಸ್ಯರೂ ಹಾಗೂ ಮಾಜಿ ಸೈನಿಕರಾದ ಕೆ.ಯು. ಸುಬ್ಬಯ್ಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಬಾಲಕೃಷ್ಣ ನಂಬಿಯಾರ್ ಇವರುಗಳನ್ನು ಸನ್ಮಾನಿಸಲಾಗುವದು. ಸಂಜೆ ಉದಯ ಟಿವಿ ಜಾಲಿಬಾಯ್ಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ತಾ. 24 ರಂದು ಆಟೋಟ ಸ್ಪರ್ಧೆ

ಆಯುಧ ಪೂಜೆ ಅಂಗವಾಗಿ ಸಂಘದ ಸದಸ್ಯರಿಗೆ ತಾ.24ರಂದು ಸ.ಮಾ.ಪ್ರಾ. ಶಾಲಾ ಮೈದಾನದಲ್ಲಿ ಕಬಡ್ಡಿ, ಹಗ್ಗ ಜಗ್ಗಾಟ, ಗುಡ್ಡಗಾಡು ಓಟ, ಭಾರದ ಗುಂಡು ಎಸೆತ, ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448325974, 9448504477, 9844461134 ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಮೋಟಾರ್ ಯೂನಿಯನ್ ಉಪಾಧ್ಯಕ್ಷ ಡಿ.ಜೆ.ಪರಮೇಶ್, ಕಾರ್ಯದರ್ಶಿ ಬಿ.ವಿ.ಬಾಲಕೃಷ್ಣ ಪೂಜಾರಿ, ಖಜಾಂಚಿ ಕೆ.ಎಚ್.ಖಾದರ್, ಸಹ ಕಾರ್ಯದರ್ಶಿಗಳಾದ ಎ.ಕೆ.ಪ್ರಕಾಶ್, ಚನ್ನಪ್ಪ ಉಪಸ್ಥಿತರಿದ್ದರು.