ಕುಶಾಲನಗರ, ಸೆ. 19: ಪ್ರಸಕ್ತ ದಿನಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಸಂಘ-ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸುತ್ತಿರುವದು ಶ್ಲಾಘನೀಯ ವಿಚಾರವಾಗಿದೆ ಎಂದು ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಹೇಳಿದರು.

ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಕಾನ್‍ಬೈಲು ಪ್ರೌಢಶಾಲೆ ಜಂಟಿಯಾಗಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಆನೆಕಾಡು ಮೀಸಲು ಅರಣ್ಯದಲ್ಲಿ ಹಮ್ಮಿ ಕೊಂಡಿದ್ದ ಬೀಜದುಂಡೆ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರಣ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ಆಗಬೇಕಿದೆ. ಈಗಿರುವ ಅರಣ್ಯ ಸಂಪತ್ತನ್ನು ಸಂರಕ್ಷಿಸುವದರೊಂದಿಗೆ ಸಸಿಗಳನ್ನು ನೆಟ್ಟು ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು. ಪರಿಸರದ ಬಗ್ಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸುವದು ಅತ್ಯಗತ್ಯವಾಗಿದೆ ಎಂದು ಲಿಂಗರಾಜು ಹೇಳಿದರು.

ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾನ್‍ಬೈಲ್ ಪ್ರೌಢಶಾಲೆ ವಿದ್ಯಾರ್ಥಿಗಳು, ಅರಣ್ಯ ರಕ್ಷಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು ಅರಣ್ಯದಲ್ಲಿ ಬಿದಿರು, ಹಲಸು ಮತ್ತಿತರ ನೂರಾರು ಸಂಖ್ಯೆಯ ಬೀಜದುಂಡೆಗಳನ್ನು ಬಿತ್ತನೆ ಮಾಡಿದರು. ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್, ಬೆಳೆಗಾರರ ಸಂಘದ ಅಧ್ಯಕ್ಷ ದಿನೇಶ್, ನಿರ್ದೇಶಕರಾದ ಅಯ್ಯಣ್ಣ, ತಮ್ಮಯ್ಯ, ಕಾನ್‍ಬೈಲ್ ಗ್ರಾಮ ಪಂಚಾಯಿತಿ ಸದಸ್ಯ ಅಂಬೇಕಲ್ ಚಂದ್ರ, ಪ್ರೌಢಶಾಲಾ ಶಿಕ್ಷಕ ದಿನೇಶ್ ಮತ್ತಿತರರು ಇದ್ದರು.