ಮಡಿಕೇರಿ, ಸೆ. 19: ವಿಶ್ವವಿಖ್ಯಾತ ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ಮಡಿಕೇರಿಯ ನಗರವ್ಯಾಪಿ ಅಂಗಡಿಗಳು, ದೇವಾಲಯಗಳು, ಸರ್ಕಾರಿ ಕಟ್ಟಡಗಳನ್ನು ಆಕರ್ಷಕವಾಗಿ ಅಲಂಕರಿಸುವ ಮೂಲಕ ನಾಡಹಬ್ಬ ಜನೋತ್ಸವ ಸಂಭ್ರಮಕ್ಕೆ ವರ್ಣಮಯ ದೀಪಾಲಂಕಾರದ ಮೆರಗು ನೀಡುವಂತೆ ದಸರಾ ಅಲಂಕಾರ ಸಮಿತಿಯ ಅಧ್ಯಕ್ಷÀ ಸಿ.ಕೆ. ನಂದೀಶ್ ಮನವಿ ಮಾಡಿದ್ದಾರೆ.

ದಸರಾ ಸಮಿತಿಯು ನಾಡಹಬ್ಬ ದಸರಾ ಜನೋತ್ಸವ ಪ್ರಯುಕ್ತ ಅಲಂಕಾರ ಸ್ಪರ್ಧೆಯನ್ನು ದಸರಾ ಅಲಂಕಾರ ಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಸುತ್ತಾ ಬರುತ್ತಿದ್ದು, ವಿವಿಧ ವಿಭಾಗದ ಸ್ವರ್ಧೆಗಳನ್ನು ಆಯೋಜಿಸಲಾಗಿದೆ.

ತಾ. 21 ರಂದು ಕರಗ ಹೊರಡುವ ಸಂದರ್ಭ (ಬನ್ನಿ ಮಂಟಪದಿಂದ-ಚೌಕಿಯವರೆಗೆ) ಈ ವ್ಯಾಪ್ತಿಯ ಎಲ್ಲಾ ಮನೆಗಳ ಮುಂದೆ ರಂಗೋಲಿಯನ್ನು (ಚುಕ್ಕೆ, ಹೂವು, ಬಣ್ಣ) ಬಿಡಿಸುವದರ ಮೂಲಕ ದೇವಿಯನ್ನು ಬರ ಮಾಡಿಕೊಳ್ಳಬೇಕು. ಅತ್ಯುತ್ತಮವಾಗಿ ರಂಗೋಲಿಯನ್ನು ಬಿಡಿಸಿದವರಿಗೆ ಬಹುಮಾನವನ್ನು ನೀಡಲಾಗುವದು ಎಂದು ನಂದೀಶ್ ತಿಳಿಸಿದ್ದಾರೆ.

ಸೆ.29 ರ ಆಯುಧ ಪೂಜೆಯಂದು ಬಸ್, ಮಿನಿ ಬಸ್, ದೊಡ್ಡಲಾರಿ, ಮ್ಯಾಕ್ಷಿಕ್ಯಾಬ್, ಮಿನಿಲಾರಿ, ಕಾರು, ಜೀಪು, ಪಿಕ್‍ಅಪ್, ಟಾಟಾ ಏಸ್, 3 ಚಕ್ರದ ಆಟೋ (ಗೂಡ್ಸ್), ಆಟೋ ರಿಕ್ಷಾಗಳು, ಸೈಕಲ್, ಬೈಕ್‍ಗಳಿಗೆ ಅಲಂಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಸರಾದ ಕೊನೆಯ ದಿನ ತಾ. 30 ರಂದು ಸರ್ಕಾರಿ, ಅರೆಸರ್ಕಾರಿ, ಸಹಕಾರಿ ಇಲಾಖಾ ಕಟ್ಟಡ, ಅಲಂಕಾರ ಮಳಿಗೆ, ಟೂರ್ಸ್ ಮತ್ತು ಟ್ರಾವೆಲ್ಸ್, ಸಲೂನ್, ಎಲೆಕ್ಟ್ರಾನಿಕ್ ಮಳಿಗೆ, ಪೊಲೀಸ್ ಸ್ಟೇಷನ್, ಬೃಹತ್ ಕಟ್ಟಡಗಳು, ಬ್ಯಾಂಕ್‍ಗಳು, ಬೇಕರಿಗಳು, ಹೊಟೇಲ್‍ಗಳು, ಕ್ಯಾಂಟೀನ್‍ಗಳು, ಸ್ಟುಡಿಯೋ, ಕಲ್ಯಾಣ ಮಂಟಪ, ವರ್ಕ್‍ಶಾಪ್‍ಗಳು, ಸಣ್ಣ ಅಂಗಡಿಗಳು, ಔಷದಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಸ್ಟೇಷನರಿ ಅಂಗಡಿಗಳು, ಲಾಡ್ಜ್, ಚಿನ್ನದ ಅಂಗಡಿಗಳು, ಚಿತ್ರಮಂದಿರ, ದೇವಾಲಯಗಳು, ಪಾರ್ಲರ್‍ಗಳು, ಮುದ್ರಣಾಲಯಗಳು, ಟೈಲರ್ ಶಾಪ್‍ಗಳಿಗೆ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಲಂಕಾರ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವದು. ಭಾಗವಹಿಸುವ ಎಲ್ಲರೂ ತಮ್ಮ ಹೆಸರನ್ನು ದೂರವಾಣಿ ಅಥವಾ ಎಸ್.ಎಂ.ಎಸ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಗೊಂಬೆ ಅಲಂಕಾರಕ್ಕೆ ಬಹುಮಾನ

ನವರಾತ್ರಿಯ ಪ್ರಯುಕ್ತ ಮನೆಯಲ್ಲಿ ಮಾಡುವ ಗೊಂಬೆ ಅಲಂಕಾರಕ್ಕೆ ವಿಶೇಷ ಪ್ರೋತ್ಸಾಹಕ ಬಹುಮಾನ ಇರುವದರಿಂದ ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ವೈಭವಯುತ ಅಲಂಕಾರದೊಂದಿಗೆ ನಾಡಹಬ್ಬ ದಸರಾ ಜನೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಸಿ.ಕೆ. ನಂದೀಶ್ ಹಾಗೂ ಸಮಿತಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

ಸ್ಪರ್ಧೆಗಳಲ್ಲಿ ಭಾಗವಹಿಸುವವರು ನಂದೀಶ್ 9449140988, ಪವನ್ ದರ್ಶನ್ 9632969351 (ವಾಟ್ಸ್‍ಆಪ್), ಸಹಕಾರ್ಯದರ್ಶಿ ಗಣಪತಿ ಬಿ.ಈ. 9449903579 ಇವರನ್ನು ಸಂಪರ್ಕಿಸಬಹುದಾಗಿದೆ.