ಸೋಮವಾರಪೇಟೆ, ಸೆ. 19: ಪಟ್ಟಣದ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ತಾ. 21 ರಿಂದ 30 ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಸೋಮೇಶ್ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಚರಣೆಯ ದಿನಗಳಲ್ಲಿ ಶಕ್ತಿಪಾರ್ವತಿ ದೇವಿಯ ವಿಗ್ರಹವನ್ನು ಹೂವು, ಗಂಧ, ಮುತ್ತು, ಏಲಕ್ಕಿಯಲ್ಲಿ ಅಲಂಕರಿಸ ಲಾಗುವದು. ಪ್ರತಿನಿತ್ಯ ಸಂಜೆ 7 ಗಂಟೆಯಿಂದ ದೇವಿಗೆ ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ ಹಾಗೂ ಮಹಾ ಮಂಗಳಾರತಿ ನಡೆದು ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಸಪ್ತಮಿಯ ದಿನವಾದ ತಾ. 27 ರಂದು ಬೆಳಿಗ್ಗೆ 9 ಗಂಟೆಯಿಂದ 10 ರವರೆಗೆ ಸರಸ್ವತಿ ಪೂಜೆಯನ್ನು ಆಯೋಜಿಸಲಾಗಿದ್ದು ಅಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುವದು. ಅಷ್ಠಮಿ ದಿನವಾದ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ದುರ್ಗಾ ಹೋಮ ನಡೆಯಲಿದೆ ಎಂದರು.

ಆಚರಣೆಯ ಕೊನೆಯ ದಿನವಾದ ತಾ. 30 ರಂದು ಮಧ್ಯಾಹ್ನ 1 ಗಂಟೆಗೆ ಹೂವಿನಿಂದ ಅಲಂಕರಿಸಲ್ಪಟ್ಟ ಭವ್ಯ ಮಂಟಪದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಚಂಡೆ ಹಾಗೂ ಜಾಗಟೆ ವಾದ್ಯದೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಗುವದು. ಅಲ್ಲಿ ಸ್ನೇಹ ದ್ಯೋತಕವಾದ ಬನ್ನಿ ಎಲೆಯನ್ನು ಹಂಚಿ ದೇವಿಯ ವಿಗ್ರಹವನ್ನು ಕೆರೆಯಲ್ಲಿ ವಿಸರ್ಜಿಸಲಾಗುವದು ಎಂದು ಮಾಹಿತಿ ನೀಡಿದರು.

ಆಚರಣೆಯ ದಿನಗಳಲ್ಲಿ ದೇವಾಲಯದಲ್ಲಿ ನಡೆಯುವ ಸರಸ್ವತಿ ಪೂಜೆ, ದುರ್ಗಾ ಹೋಮ, ರಂಗಪೂಜೆ, ಹೂವಿನ ಸೇವೆ, ಆವರಣ ಸೇವೆ, ಉಯ್ಯಾಲೆ ಸೇವೆ, ಪೂರ್ಣ ಸೇವೆ ಸೇರಿದಂತೆ ಪ್ರಸಾದಗಳಿಗೆ ಸೇವಾರ್ಥದಾರರಾಗಲು ಭಕ್ತ ಕುಟುಂಬಗಳಿಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ. ಉತ್ಸವದ ಬಗೆಗಿನ ಹೆಚ್ಚಿನ ಮಾಹಿತಿಗೆ ಮೊ. 98808346450 ಅಥವಾ ಕಾರ್ಯದರ್ಶಿ ಮೊ. 9448720930ರಲ್ಲಿ ಸಂಪರ್ಕಿಸಬಹುದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಎಂ. ಶ್ರೀಕಾಂತ್, ಉಪಾಧ್ಯಕ್ಷ ರಾಮ್‍ಪ್ರಸಾದ್, ಖಜಾಂಚಿ ಎಸ್.ಎ. ಮಧುಸೂದನ್ ಉಪಸ್ಥಿತರಿದ್ದರು.

ಸುಂಟಿಕೊಪ್ಪ : ಶ್ರೀ ಮುತ್ತಪ್ಪ ಮತ್ತು ಶ್ರೀ ಚಾಮುಂಡೇಶ್ಚರಿ ದೇವಸ್ಥಾನ ಸಮಿತಿ ವತಿಯಿಂದ ನವರಾತ್ರಿ ಉತ್ಸವ ಅಂಗವಾಗಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಜಯದಶಮಿ ವರೆಗೆ 10 ದಿನಗಳ ಕಾಲ ಅಲಂಕಾರ ಹಾಗೂ ವಿಶೇಷ ಪೂಜೆ ಕೈಂಕರ್ಯಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಆರ್. ಸುಕುಮಾರ್ ತಿಳಿಸಿದ್ದಾರೆ.

ತಾ.21 ರಂದು ಪೂರ್ವಾಹ್ನ ಗಣಪತಿ ಹೋಮದೊಂದಿಗೆ ಆರಂಭಗೊಂಡು ದೇವಿಗೆ ಅರಶಿನ ಅಲಂಕಾರ, ತಾ.22 ರಂದು ಕುಂಕುಮ ಅಲಂಕಾರ, ತಾ.23 ರಂದು ಗಂಧ ಅಲಂಕಾರ, ತಾ.24 ರಂದು ದ್ರಾಕ್ಷಿ, ಗೋಡಂಬಿ ಅಲಂಕಾರ, ತಾ.25 ರಂದು ಕಡ್ಲೆ ಅಲಂಕಾರ, ತಾ.26 ರಂದು ವಿಶೇಷ ಅಲಂಕಾರ, ತಾ. 27 ರಂದು ಬೆಣ್ಣೆ ಅಲಂಕಾರ, 28 ರಂದು ದಾಳಿಂಬೆ ಅಲಂಕಾರ, ತಾ. 29 ರಂದು ಆಭರಣ ಅಲಂಕಾರ, ತಾ.30 ರಂದು ಭಸ್ಮ ಅಲಂಕಾರಗಳು ನಡೆಯಲಿದೆ ಭಕಾದಿಗಳು ಈ ಎಲ್ಲಾ ದಿನಗಳು ನಡೆಯುವ ವಿಶೇಷ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕೋರಿದ್ದಾರೆ.

ಕೂಡಿಗೆ: ಇಲ್ಲಿಗೆ ಸಮೀಪದ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿಯ ಸನ್ನಿಧಿಯಲ್ಲಿ ತಾ. 21 ರಿಂದ 29ರವರೆಗೆ ನವರಾತ್ರಿ ಪೂಜಾ ಕಾರ್ಯಕ್ರಮವು ನಡೆಯಲಿವೆ. ಸಂಜೆ 7 ರಿಂದ 8.30 ರವರೆಗೆ ದೇವಿಯ ಸನ್ನಿಧಿಯಲ್ಲಿ ಶ್ರೀ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.

ಪೂಜಾ ಕಾರ್ಯದ ನಂತರ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯುತ್ತದೆ.

ತಾ. 26 ರಂದು ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಶ್ರೀ ಚಂಡಿಕಾ ಹೋಮ-ಹವನಗಳು ನಡೆಯಲಿವೆ ಎಂದು ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಬಿ.ಎಲ್. ಸುರೇಶ್ ತಿಳಿಸಿದ್ದಾರೆ.

ಇಲ್ಲಿನ ಶ್ರೀ ದಂಡಿನಮ್ಮ ದೇವಾಲಯದ ಆವರಣದಲ್ಲಿ ದಂಡಿಕೇಶ್ವರಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ತಾ. 21 ರಿಂದ 29ರ ವರೆಗೆ ನವರಾತ್ರಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ದಂಡಿನಮ್ಮ ತಾಯಿಗೆ ವಿಶೇಷ ಪೂಜೆ, ಹೋಮ-ಹವನಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ.