ಮಡಿಕೇರಿ, ಸೆ. 19: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಸರ್ಕಾರದ ನಾನಾ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿಟ್ಟಿರುವ ವಿವಿಧ ಕಾರ್ಯಕ್ರಮಗಳ ಅನುದಾನವನ್ನು ಕಾಲಮಿತಿಯೊಳಗೆ ಖರ್ಚು ಮಾಡಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.

ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಹಕಾರ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರವಾಸೋದ್ಯಮ, ಸಾರ್ವಜನಿಕ ಶಿಕ್ಷಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ನಗರಾಭಿವೃದ್ಧಿ, ಲೋಕೋಪಯೋಗಿ, ವೈದ್ಯಕೀಯ ಶಿಕ್ಷಣ, ಆರೋಗ್ಯ, ಕಾರ್ಮಿಕ ಹೀಗೆ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟರಿಗಾಗಿ ಸಾಕಷ್ಟು ಕಾರ್ಯಕ್ರಮಗಳಿದ್ದು, ಅವುಗಳನ್ನು ಅರ್ಹರಿಗೆ ತಲುಪಿಸಿ ಪ್ರಗತಿಯ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಭೂಮಿ ಇಲ್ಲದ ಪರಿಶಿಷ್ಟರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಸೌಲಭ್ಯಗಳನ್ನು ತಲುಪಿಸಲು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತವೆ. ಆದರೂ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ ಇವು ಎಷ್ಟರ ಮಟ್ಟಿಗೆ ತಲುಪಿವೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸೌಲಭ್ಯ ಪಡೆದವರು ಸ್ವತಃ ಬಳಸಿಕೊಳ್ಳುತ್ತಿದ್ದಾರೆಯೇ ಅಥವಾ ದುರುಪಯೋಗ ಪಡಿಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ. ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಲ್ಲಿ ಬಾಕಿ ಇರುವ ವಸತಿ, ರಸ್ತೆ, ಸಮುದಾಯ ಭವನ, ಕುಡಿಯುವ ನೀರು ಮತ್ತಿತರ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಜಿ.ಪಂ.ಇಂಜಿನಿಯರ್‍ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದಾನೋಜಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಆನಂದ್, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್, ಕಾರ್ಮಿಕ ಇಲಾಖೆಯ ಅಧಿಕಾರಿ ರಾಮಕೃಷ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಮಮ್ತಾಜ್, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಮೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಚೆನ್ನಬಸವಯ್ಯ, ರಾಮೇಗೌಡ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.