ಮಡಿಕೇರಿ, ಸೆ. 19: ಇತ್ತೀಚೆಗೆ ದಕ್ಷಿಣ ಕೊಡಗಿನ ಅರ್ವತ್ತೋಕ್ಲು ಗ್ರಾಮದ ಮೈಸೂರಮ್ಮ ಬೀದಿಯಲ್ಲಿ ನಡೆದ ಪುತ್ರ ರಮೇಶ್ ಹತ್ಯೆ ಮತ್ತು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ಮತ್ತೊಬ್ಬ ಪÀÅತ್ರ ಸುರೇಶ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ತಾಯಿ ರಾಜೇಶ್ವರಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 21 ರಂದು ತಮ್ಮ ಪುತ್ರ ರಮೇಶ್‍ನನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಗೋಣಿಕೊಪ್ಪ ಪೊಲೀಸರು ಆರೋಪಿ ನಾರಾಯಣನನ್ನು ಬಂಧಿಸಿರುವದು ಸ್ವಾಗತಾರ್ಹ. ಆದರೆ ಈ ಕೊಲೆಯ ಹಿಂದೆ ಆರೋಪಿ ನಾರಾಯಣನ ಇಡೀ ಕುಟುಂಬ ಭಾಗಿಯಾಗಿದೆ ಎಂದು ಆರೋಪಿಸಿದರು. 2016 ಮೇ 25 ರಂದು ತಮ್ಮ ಮತ್ತೊಬ್ಬ ಪುತ್ರ ಸುರೇಶ್ ಸಂಶಯಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎರಡು ಪ್ರಕರಣಗಳ ಬಗ್ಗೆ ಸಮಗ್ರ ತನಿಖೆÉಯ ಅಗತ್ಯವಿದ್ದು, ಸಿಐಡಿ ತನಿಖೆÉಗೆ ಒಪ್ಪಿಸುವದು ಸೂಕ್ತವೆಂದು ಅಭಿಪ್ರಾಯಪಟ್ಟರು.

ತನಿಖೆ ಬಗ್ಗೆ ಮುಖ್ಯಮಂತ್ರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವರು, ಸಂಸದದರು, ಶಾಸಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿರುವದಾಗಿ ರಾಜೇಶ್ವರಿ ತಿಳಿಸಿದರು. ಕುಕ್ಕೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪುತ್ರ ರಮೇಶನ ಕೊಲೆ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದ ಅವರು, ಆರೋಪಿ ನಾರಾಯಣನಿಗೆ ಯಾವದೇ ಕಾರಣಕ್ಕೂ ಕಾನೂನು ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದೆಂದರು. ನಾರಾಯಣ ಮಾನಸಿಕ ರೋಗಿಯಂತೆ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಶಿಕ್ಷೆಯಿಂದ ವಿನಾಯಿತಿ ಪಡೆಯುವದಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾನೆ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜೇಶ್ವರಿ ಹೇಳಿದರು. ಇಬ್ಬರು ಪುತ್ರರ ಸಾವಿನ ನಂತರ ತಾನು ಮತ್ತು ಪುತ್ರಿ ಅನಾಥವಾಗಿದ್ದು, ಜೀವಭಯ ಕಾಡತೊಡಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಜೀವನೋಪಾಯಕ್ಕಾಗಿ ಮಾಡುತ್ತಿದ್ದ ವ್ಯಾಪಾರವನ್ನು ಕೂಡ ಮುಂದುವರಿಸಲು ಸಾಧ್ಯವಾಗದೆ ಆತಂಕದ ವಾತಾವರಣದಲ್ಲಿ ಜೀವಿಸುತ್ತಿರುವದಾಗಿ ಹೇಳಿದರು. ಎರಡು ಪ್ರಕರಣಗಳನ್ನು ಸಿಐಡಿ ತನಿಖೆÉಗೆ ಒಪ್ಪಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ರಾಜೇಶ್ವರಿ ಒತ್ತಾಯಿಸಿದರು.

ಗೋಷ್ಠಿಯಲ್ಲಿ ರಾಜೇಶ್ವರಿ ಅವರ ಪುತ್ರಿ ಹಾಗೂ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಎಂ. ಸೆಲ್ವಿ ಉಪಸ್ಥಿತರಿದ್ದರು.