ವೀರಾಜಪೇಟೆ, ಸೆ. 19: ಕೊಡಗು ಜಿಲ್ಲೆಯ ಕೃಷಿ ಇಲಾಖೆಯ ಸಮಗ್ರ ಜಲಾನಯನ ನಿರ್ವಹಣಾ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಬೇಕಿದ್ದ ಹಣವನ್ನು ಬೇನಾಮಿ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ದುರುಪಯೋಗಗೊಂಡಿದೆ ಎಂದು ಜಯ ಕರ್ನಾಟಕ ಸಂಘಟನೆಯಯ ತಾಲೂಕು ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಹಿತಿ ಹಕ್ಕಿನಿಂದ ಪಡೆದುಕೊಂಡ ದಾಖಲೆ ಪ್ರತಿಯನ್ನು ಮಾಧ್ಯಮದವರಿಗೆ ತೋರಿಸಿ ಕಳೆದ ಮೂರು ವರ್ಷಗಳಿಂದ ವೀರಾಜಪೇಟೆಯ ಮೈತಾಡಿ, ಅರಮೇರಿ, ಕಾಕೋಟುಪರಂಬು, ಕೆದಮುಳ್ಳೂರು, ಮಡಿಕೇರಿ ತಾಲೂಕಿನ ಗಾಳಿಬೀಡು, ಕಳಕೇರಿ ನಿಡುಗಣೆ, ಮೊಣ್ಣಂಗೇರಿ, ಮುಕ್ಕೋಡ್ಲು, ಕಾಟಕೇರಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೈತರ ಹೆಸರಿನಲ್ಲಿ ತೊಟ್ಟಿಲು ಗುಂಡಿ, ಕೃಷಿ ಹೊಂಡ, ಚೆಕ್ ಡ್ಯಾಂಗಳನ್ನು ನಿರ್ಮಿಸಿ ಹಣವನ್ನು ನೈಜ ಫಲಾನುಭವಿಗಳಿಗೆ ನೀಡದೆ ಬೇನಾಮಿ ಹೆಸರಿನ ಫಲಾನುಭವಿಗಳ ಹೆಸರನ್ನು ಸೃಷ್ಟಿಸಿ ಕೋಟ್ಯಂತರ ರೂ. ಗಳನ್ನು ಡ್ರಾ ಮಾಡಿ ಸರಕಾರದ ಹಣವನ್ನು ದುರುಪಯೋಗ ಮಾಡಲಾಗಿದೆ, ವಿಶೇಷ ಎಂದರೆ ವೀರಾಜಪೇಟೆಯ ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಸಿಬ್ಬಂದಿಗಳ ಹೆಸರಿನಲ್ಲಿ 15ರಿಂದ 20 ಲಕ್ಷ ಹಣ ಡ್ರಾ ಮಾಡಲಾಗಿದೆ. ಕೃಷಿ ಹೊಂಡವನ್ನು ಅಂದಾಜು 15 ಸಾವಿರ ರೂಗಳಲ್ಲಿ ಕಾಮಗಾರಿ ನಡೆಸಿ ಮಣ್ಣು ಕೂಲಿ ಕಾರ್ಮಿಕರಿಂದ ಕೆರೆಯ ಅಳತೆ ಹಾಗೂ ನಕ್ಷೆಯನ್ನು ನಿರ್ಮಿಸಿ ಇಲ್ಲಿಯೂ ನೈಜ ಫಲಾನುಭವಿಗಳ ಹೆಸರನ್ನು ಬಳಸಿಕೊಂಡು ಲಕ್ಷಾಂತರ ಹಣವನ್ನು ಡ್ರಾ ಮಾಡಿಕೊಳ್ಳಲಾಗಿದೆ. ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಸರ¨ರಾಜು ಮಾಡುತ್ತಿರುವ ಹಣ್ಣು ಹಂಪಲು ಗಿಡಗಳನ್ನು ಖಾಸಗಿ ನರ್ಸರಿಗಳಿಗೆ ಮಾರಾಟ ಮಾಡಿ ಕೇವಲ ಸಿಲ್ವರ್ ಗಿಡಗಳನ್ನು ಮಾತ್ರ ಬೆರಳೆಣಿಕೆಯ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಆರೋಪಿಸಿದರು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಇಲಾಖೆಯಿಂದ ಸಂಪೂರ್ಣ ದಾಖಲೆಯನ್ನು ಪಡೆದುಕೊಂಡಿದ್ದು, ಈ ಹಣ ದುರುಪಯೋಗದ ಸಂಬಂಧ ಲೋಕಾಯುಕ್ತ ಹಾಗೂ ಎ.ಸಿ.ಬಿ. ಇಲಾಖೆಗೆ ನೇರವಾಗಿ ದೂರು ನೀಡಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕುಂಞÂರ ಸುನು ಸುಬ್ಬಯ್ಯ, ಹರ್ಷ, ಮಹೇಶ್, ಪ್ರಕಾಶ್ ರೈ ಉಪಸ್ಥಿತರಿದ್ದರು.