ಮಡಿಕೇರಿ ಸೆ.19 : ಕನ್ನಡದ ಹೆಸರಾಂತ ನಟ ನವರಸ ನಾಯಕ ಜಗ್ಗೇಶ್ ಅವರ ದ್ವಿತೀಯ ಪುತ್ರ ಯತಿರಾಜ್ ಇಂದು ಮಡಿಕೇರಿಗೆ ಆಗಮಿಸಿದ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸಿದ ಘಟನೆ ನಡೆಯಿತು.ನೀಲಿ ಬಣ್ಣದ ಇಕೋ ಸ್ಪೋಟ್ರ್ಸ್ ಕಾರಿನಲ್ಲಿ ಬಂದಿದ್ದ ಯತಿರಾಜ್ ವೇಗದ ಚಾಲನೆಯೊಂದಿಗೆ ಕೊಹಿನೂರು ರಸ್ತೆ ಬಳಿ ‘ಒನ್ವೇ’ ನಿಯಮವನ್ನು ಉಲ್ಲಂಘಿಸಿದ್ದಾರೆ. ಅತೀ ವೇಗವಾಗಿ ಕಾರು ಚಾಲನೆ ಬಗ್ಗೆ ಕೆಲ ಸಾರ್ವಜನಿಕರು ಪ್ರಶ್ನಿಸಿದ್ದು, ಈ ಸಂದರ್ಭ ಯತಿರಾಜ್ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸ್ ಪೇದೆಗಳಾದ ಸಂದೀಪ್ ರೈ ಹಾಗೂ ವೈಶಾಕ್ ರೈ ಯತಿರಾಜ್ ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಮದ್ಯಪಾನ ಮಾಡಿರಬಹುದಾದ ಸಂಶಯದಿಂದ ಯತಿರಾಜ್ ಅವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಯತಿರಾಜ್ ಮದ್ಯಪಾನ ಮಾಡಿಲ್ಲ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ಸಹಾಯಕ ಠಾಣಾಧಿಕಾರಿ ಶಿವಪ್ಪ ಅವರು ‘ಒನ್ವೇ’ ನಿಯಮ ಉಲ್ಲಂಘನೆ ಹಾಗೂ ವೇಗದ ಚಾಲನೆಗಾಗಿ ಯತಿರಾಜ್ಗೆ ರೂ. 500 ದಂಡ ವಿಧಿಸಿ ಕಳುಹಿಸಿದ್ದಾರೆ.
ಅಷ್ಟಕ್ಕೆ ಮುಗಿಯಲಿಲ್ಲ...!
ಯತಿರಾಜ್ಗೆ ದಂಡ ವಿಧಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡಿದ್ದನ್ನು ಕಂಡು ನಟ ಜಗ್ಗೇಶ್ ಠಾಣೆಗೆ ದೂರವಾಣಿ ಕರೆ ಮಾಡಿ ಯತಿರಾಜ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಮನೆಯಲ್ಲಿ ಹೇಳದೆ ಬಂದಿದ್ದಾನೆ. ಆತನನ್ನು ಎಲ್ಲಿಗೂ ಕಳುಹಿಸಬೇಡಿ. ಠಾಣೆಯಲ್ಲಿಯೆ ಇರಿಸಿಕೊಳ್ಳಿ, ನಾವು ಬಂದು ಕರೆದೊಯ್ಯುತ್ತೇವೆ ಎಂದು ಹೇಳಿದರೆನ್ನಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಯತಿರಾಜ್ ಠಾಣೆಯಿಂದ ತೆರಳಿ ಆಗಿತ್ತು. ಜಗ್ಗೇಶ್ ಅವರು ನೀಡಿದ ಮಾಹಿತಿಯಂತೆ ಜಾಗೃತರಾದ ಪೊಲೀಸರು ಯತಿರಾಜ್ಗಾಗಿ ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ ವೇಳೆಗೆ ನಗರ ವ್ಯಾಪ್ತಿಯಲ್ಲಿ ಯತಿರಾಜ್ ಕಾರು ಸಹಿತ ಪೊಲೀಸರಿಗೆ ಸಿಕ್ಕಿದ್ದು, ಠಾಣೆಗೆ ಕರೆದೊಯ್ದ ಪೊಲೀಸರು ಅಲ್ಲಿ ಮಾನಸಿಕ ರೋಗ ತಜ್ಞರನ್ನು ಕರೆಸಿ ಅವರ ಜೊತೆಯಲ್ಲಿ ಯತಿರಾಜ್ನನ್ನು ಇರಿಸಿಕೊಂಡು ಬಳಿಕ ಪೋಷಕರು ಬಂದ ನಂತರ ಅವರಿಗೆ ಒಪ್ಪಿಸಿದ್ದಾರೆ.