ಸೋಮವಾರಪೇಟೆ, ಸೆ.20: ಕೃಷಿ ಫಸಲುಗಳೊಂದಿಗೆ ಬೆಳೆಗಾರರು ಮತ್ತು ರೈತರ ಬದುಕನ್ನೂ ತಿನ್ನುತ್ತಿರುವ ಆಫ್ರಿಕನ್ ದೈತ್ಯ ಶಂಕುಹುಳುಗಳ ಕಾಟದಿಂದ ಮುಕ್ತಿ ಪಡೆಯುವ ಸಲುವಾಗಿ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಇಂದು ತಾ.ಪಂ. ಉಪಾಧ್ಯಕ್ಷರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.ಕಾಫಿ ಮಂಡಳಿಯ ಸದಸ್ಯರೂ ಆಗಿರುವ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರ ಆಸಕ್ತಿಯ ಮೇರೆ ಆಯೋಜನೆಗೊಂಡಿದ್ದ ಸಭೆಯಲ್ಲಿ ಶಂಕುಹುಳುಗಳ ನಿಯಂತ್ರಣ ಸಂಬಂಧ ಅನೇಕ ಚರ್ಚೆಗಳು ನಡೆದವು. ಸಾರ್ವಜನಿಕರು ಶಂಕುಹುಳುವನ್ನು ಸಂಗ್ರಹಿಸಿ ಕೊಟ್ಟರೆ ಅವರಿಗೆ ಕೆ.ಜಿ.ಯೊಂದಕ್ಕೆ ತಲಾ 10 ರೂಪಾಯಿ ಹಣ ನೀಡುವದು. ಸಂಗ್ರಹವಾದ ಹುಳುಗಳನ್ನು ಗುಂಡಿ ತೆಗೆದು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಇದರೊಂದಿಗೆ ಈಗಾಗಲೇ ಶಂಕುಹುಳುಗಳು ಬಾಧಿಸಲ್ಪಟ್ಟಿರುವ ಪ್ರದೇಶಗಳಿಂದ ಯಾವದೇ ಕಾರಣಕ್ಕೂ ನರ್ಸರಿ ಗಿಡಗಳು, ನರ್ಸರಿಗಾಗಿ ಮಣ್ಣನ್ನು ಬೇರೆಡೆಗೆ ತೆಗೆದುಕೊಂಡು ಹೋಗಬಾರದು ಎಂಬ ಬಗ್ಗೆ ಬೆಳೆಗಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.

ಇದೇ ಸಂದರ್ಭ ಕೆಲವಾರು ಇಲಾಖೆಗಳನ್ನು ಒಳಗೊಂಡಂತೆ ತಲಾ 25 ಸಾವಿರ ರೂಪಾಯಿಗಳನ್ನು ಸಂಗ್ರಹಿಸುವದು, ತೋಟಗಾರಿಕಾ ಇಲಾಖೆಯಿಂದಲೂ ಹಣ ತರಿಸಿಕೊಂಡು ಹಂಡ್ಲಿ ಗ್ರಾಮ ಪಂಚಾಯಿತಿ ಮೂಲಕ ಸಾರ್ವಜನಿಕರಿಗೆ ಹಣ ನೀಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತøತ ಚರ್ಚೆ ನಡೆಸಲಾಯಿತು. ಈಗಾಗಲೇ ಬೆಳೆಗಾರರ ಸಂಘದಿಂದ ಕೆ.ಜಿ.ಗೆ 4 ರೂಪಾಯಿಯಂತೆ ಹುಳುಗಳನ್ನು ಖರೀದಿಸಲಾಗುತ್ತಿದ್ದು, ಇದರ ಮೊತ್ತವನ್ನು 10 ರೂಪಾಯಿಗೆ ಹೆಚ್ಚಿಸಿದರೆ ಪರಿಣಾಮಕಾರಿಯಾಗಿ ನಿರ್ವಹಣೆ ಸಾಧ್ಯವಾಗಬಹುದು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಮಣಗಲಿ, ಬಡಕನಹಳ್ಳಿ, ಹುಲುಸೆ, ಮೂದರವಳ್ಳಿ, ಕೆರೆಹಳ್ಳಿ, ಹೆಬ್ಬುಲುಸೆ ಸೇರಿದಂತೆ ಸುತ್ತಮುತ್ತಲಲ್ಲಿ ಅಸಂಖ್ಯಾತ ಶಂಕುಹುಳುಗಳು ಕಂಡುಬಂದಿವೆ. ಇತ್ತೀಚೆಗೆ ಸೋಮವಾರಪೇಟೆ ಪಟ್ಟಣ ಸಮೀಪದ ಹಾರಳ್ಳಿಯಲ್ಲೂ ಹುಳುಗಳು ಕಾಣಿಸಿಕೊಂಡಿವೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಅವರು ಸಭೆಯ ಗಮನ ಸೆಳೆದರು.

ಸದ್ಯದ ಮಟ್ಟಿಗೆ ಈ ಭಾಗದಿಂದ ನರ್ಸರಿ ಗಿಡಗಳನ್ನು ಬೇರೆಡೆಗಳಿಗೆ ತೆಗೆದುಕೊಂಡು ಹೋಗಬಾರದು. ಈ ಬಗ್ಗೆ ಬೆಳೆಗಾರರಿಗೆ ಮತ್ತು ನರ್ಸರಿ ಮಾಲೀಕರುಗಳಿಗೆ ಜಾಗೃತಿ ಮೂಡಿಸಬೇಕು. ಶಂಕುಹುಳುಗಳ ನಿಯಂತ್ರಣಕ್ಕೆ ಸಾಮೂಹಿಕ ಶ್ರಮ ಅನಿವಾರ್ಯವಾಗಿದ್ದು, ಅವುಗಳನ್ನು ಹಿಡಿದು ಕೊಲ್ಲುವುದೇ (ಕ್ಯಾಚ್ ಅಂಡ್ ಕಿಲ್) ಸೂಕ್ತ. ಈ ಹಿನ್ನೆಲೆ ಒಂದು ಕೆ.ಜಿ. ಹುಳುವಿಗೆ 10 ರೂಪಾಯಿ ನಿಗದಿಗೊಳಿಸಿ, ಸಂಗ್ರಹವಾಗುವ ಹುಳುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಕಾಫಿ ಮಂಡಳಿ ಸದಸ್ಯ ಅಭಿಮನ್ಯುಕುಮಾರ್, ತಾ.ಪಂ. ಸದಸ್ಯ ಕುಶಾಲಪ್ಪ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ ಅವರುಗಳು ಅಭಿಪ್ರಾಯಿಸಿದರು.

ಸಂಗ್ರಹವಾಗುವ ಹುಳುಗಳನ್ನು ಗುಂಡಿ ತೆಗೆದು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮತ್ತು ಸಾರ್ವಜನಿಕರಿಗೆ ಹಣ ನೀಡುವ ಕೆಲಸವನ್ನು ಹಂಡ್ಲಿ ಗ್ರಾಮ ಪಂಚಾಯಿತಿ ಮೂಲಕ ನಿರ್ವಹಿಸಲು ತೀರ್ಮಾನಿಸಲಾಯಿತು. ಇದರೊಂದಿಗೆ ಕಾಫಿ ಮಂಡಳಿಗೆ 1ಲಕ್ಷ ಅನುದಾನದ ಬೇಡಿಕೆ ಇಡುವಂತೆಯೂ, ಶಾಸಕರಿಂದಲೂ ಅನುದಾನ ಪಡೆಯುವಂತೆ ನಿರ್ಧರಿಸಲಾಯಿತು.

ಆಫ್ರಿಕನ್ ಶಂಕುಹುಳುಗಳ ಬಾಧೆಯ ಬಗ್ಗೆ ತಾನು ಈ ಹಿಂದೆಯೇ ದೆಹಲಿ ಕೃಷಿ ಭವನದ ಅಗ್ರಿಕಲ್ಚರಲ್ ಅಂಡ್ ಫಾರ್ಮರ್ಸ್ ವೆಲ್‍ಫೇರ್‍ನ ಕಾರ್ಯದರ್ಶಿ ರಾಧಾ ಮೋಹನ್ ಸಿಂಗ್, ರಸಗೊಬ್ಬರ ಖಾತೆ ಸಚಿವ ಅನಂತ್‍ಕುಮಾರ್ ಅವರ ಆಪ್ತ ಕಾರ್ಯದರ್ಶಿ ವಿಜಯ್ ರಂಜನ್ ಸಿಂಗ್, ಕಾಮರ್ಸ್ ಮತ್ತು ಇಂಡಸ್ಟ್ರೀಸ್‍ನ ಕಾರ್ಯದರ್ಶಿ ವಿಫುಲ್ ಬನ್ಸಾಲ್ ಅವರುಗಳಿಗೆ ಪತ್ರ ಬರೆದಿದ್ದು, ಅದರಂತೆ ಈರ್ವರು ವಿಜ್ಞಾನಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದುವರೆಗೂ ಅವರಿಂದ ಯಾವದೇ ವರದಿಗಳು ಬಂದಿಲ್ಲ ಎಂದು ಕಾಫಿ ಮಂಡಳಿ ಸದಸ್ಯ ಅಭಿಮನ್ಯುಕುಮಾರ್ ಹೇಳಿದರು.

ತಾಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೂ ಸೇರಿದಂತೆ ಶಾಸಕರನ್ನೂ ಒಳಗೊಂಡಂತೆ ಸಮಿತಿ ರಚಿಸಿ ತೋಟಗಾರಿಕಾ ಇಲಾಖೆಯ ಕಮಿಷನರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಬೇಕು. ಹುಳುಗಳ ನಿಯಂತ್ರಣಕ್ಕೆ ಇಲಾಖೆಯಿಂದ ಅನುದಾನ ಬಿಡುಗಡೆಯಾಗುವಂತೆ ಕ್ರಮ ವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಆದಷ್ಟು ಶೀಘ್ರ ಬೆಂಗಳೂರಿಗೆ ನಿಯೋಗ ತೆರಳಬೇಕು ಎಂದು ಅಭಿಮನ್ಯುಕುಮಾರ್ ತಿಳಿಸಿದರು. ಹುಳುಗಳನ್ನು ಸಂಗ್ರಹಿಸುವ ಸಂದರ್ಭ ಕೈಕವಚಗಳನ್ನು ಧರಿಸಿರಬೇಕು. ಕೈಕವಚಗಳನ್ನು ವಿತರಿಸುವ ಹೊಣೆಯನ್ನು ಆರೋಗ್ಯ ಇಲಾಖೆ ಹೊರಬೇಕು ಎಂದು ಅಭಿಮನ್ಯುಕುಮಾರ್ ನಿರ್ದೇಶನ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಆರೋಗ್ಯ ಇಲಾಖೆಯ ಶಿಕ್ಷಣ ಅಧಿಕಾರಿ ಶಾಂತಿ ಮಾತನಾಡಿ, ಜಾಗೃತಿಯ ಕರಪತ್ರಗಳನ್ನು ಮುದ್ರಿಸಿಕೊಟ್ಟರೆ ಸ್ಥಳೀಯ ಆಶಾ ಕಾರ್ಯಕರ್ತೆಯರ ಮುಖಾಂತರ ಕೃಷಿಕರಲ್ಲಿ ಜಾಗೃತಿ ಮೂಡಿಸಲಾಗುವದು ಎಂದರು.

ಕೃಷಿ, ತೋಟಗಾರಿಕೆ ಮತ್ತು ಕಾಫಿ ಮಂಡಳಿಯನ್ನು ಒಳಗೊಂಡಂತೆ ಜಾಗೃತಿ ಕರಪತ್ರಗಳನ್ನು ಮುದ್ರಿಸುವಂತೆ ಸಭೆಯಲ್ಲಿದ್ದ ಕೃಷಿ ಇಲಾಖಾಧಿಕಾರಿ ಮುಕುಂದ ಅವರಿಗೆ ಸೂಚಿಸಲಾಯಿತು. ತೋಟಗಾರಿಕಾ ಕಮಿಷನರ್ ಅವರನ್ನು ಭೇಟಿ ಮಾಡುವ ಬಗ್ಗೆ ಇಲಾಖೆಯ ಅಧಿಕಾರಿ ಗಣೇಶ್ ಅವರಿಗೆ ಜವಾಬ್ದಾರಿ ನೀಡಲಾಯಿತು. ಕಾಫಿ ಮಂಡಳಿ ಯಿಂದ ಹುಳುಗಳ ನಿಯಂತ್ರಣಕ್ಕೆ ಬೇಕಾದ ಕ್ರಿಮಿನಾಶಕಗಳ ಕಿಟ್‍ಗಳನ್ನು ವಿತರಿಸುವಂತೆ ಅಧಿಕಾರಿ ಮುರಳೀಧರ್ ಅವರಿಗೆ ತಿಳಿಸಲಾಯಿತು.

ಸಭೆಯಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್, ಸದಸ್ಯ ಸೋಮಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣು ಗೋಪಾಲ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್, ಕಾಫಿ ಮಂಡಳಿಯ ಅಧಿಕಾರಿಗಳಾದ ಲಕ್ಷ್ಮಿಕಾಂತ್, ಮಾಚಯ್ಯ, ತಾ.ಪಂ. ವ್ಯವಸ್ಥಾಪಕ ರವೀಂದ್ರ ಅವರುಗಳು ಭಾಗವಹಿಸಿದ್ದರು.

-ವಿಜಯ್ ಹಾನಗಲ್