ಸೋಮವಾರಪೇಟೆ, ಸೆ. 20: ಇಲ್ಲಿನ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆಚರಿಸಿದ ಗೌರಿ-ಗಣೇಶ ಉತ್ಸವಕ್ಕೆ ಸಾರ್ವಜನಿಕ ದಾನಿಗಳು ಧನ ಸಹಾಯ ನೀಡಿದ್ದು, ಇದರಲ್ಲಿ ರೂ. 38 ಸಾವಿರ ಉಳಿತಾಯವಾಗಿದೆ ಎಂದು ಸಮಿತಿ ಅಧ್ಯಕ್ಷ ಚಂದನ ಸುಬ್ರಮಣಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಲೆಕ್ಕಪತ್ರ ಮಂಡನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡಿಮೆ ಹಣದಲ್ಲಿ ಅಚ್ಚುಕಟ್ಟಾದ ಕಾರ್ಯಕ್ರಮಗಳು ನಡೆದಿವೆ. ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಶ್ರಮದಿಂದ ಉತ್ಸವ ಅದ್ದೂರಿಯಾಗಿ ನಡೆದಿದೆ ಎಂದರು.

ದಾನಿಗಳೇ ಸದಸ್ಯರಾಗಿರುವ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಉತ್ಸವಕ್ಕೆ ಒಟ್ಟು 2,76,850 ರೂಪಾಯಿ ಸಂಗ್ರಹವಾಗಿದ್ದು, ಇದರಲ್ಲಿ 38 ಸಾವಿರ ಹಣ ಉಳಿಕೆಯಾಗಿದೆ. ಉಳಿಕೆ ಹಣವನ್ನು ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯ ಉದ್ದೇಶಕ್ಕೆ ಬಳಸಲಾಗುವದು ಎಂದರು.

ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ದರ್ಶನ್ ಜೋಯಪ್ಪ, ಖಜಾಂಚಿ ರಂಗಸ್ವಾಮಿ, ಸಹ ಕಾರ್ಯದರ್ಶಿ ವೇಣು ಬೀರೇಬೆಟ್ಟ, ಗೌರವಾಧ್ಯಕ್ಷ ಸುರೇಶ್ ಚಕ್ರವರ್ತಿ ಅವರುಗಳು ಉಪಸ್ಥಿತರಿದ್ದರು.