ಮಡಿಕೇರಿ, ಸೆ. 20: ಐತಿಹಾಸಿಕ ಹಿನ್ನಲೆಯಿರುವ ಸುಪ್ರಸಿದ್ಧ ಮಡಿಕೇರಿ ದಸರಾ ಉತ್ಸವ ನಾಡಹಬ್ಬಕ್ಕೆ ತಾ. 21 ರಿಂದ (ಇಂದಿನಿಂದ) ಚಾಲನೆ ದೊರಕಲಿದೆ. ನಗರದ ಪ್ರಮುಖ ನಾಲ್ಕು ಶಕ್ತಿ ದೇವತೆಗಳ ಕರಗ ಮಹೋತ್ಸವದ ಆರಂಭದೊಂದಿಗೆ ನಾಡಹಬ್ಬಕ್ಕೆ ಚಾಲನೆ ದೊರಕಲಿದೆ.ಮಂಜಿನ ನಗರಿಯ ದಶ ದೇವಾಲಯಗಳ ಪೈಕಿ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ತಾ. 21ರಂದು (ಇಂದು) ಸಂಜೆ ಸೋಮವಾರಪೇಟೆ ರಸ್ತೆಯಲ್ಲಿರುವ ಪಂಪಿನ ಕೆರೆ ಬಳಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಕರಗ ದೇವತೆಗಳ ನಗರ ಪ್ರದಕ್ಷಿಣೆ ಆರಂಭವಾಗಲಿದೆ. ದಸರಾ ಸಮಿತಿ ದಶಸಮಂಟಪ ಸಮಿತಿ ಕರಗ ಉತ್ಸವ ಸಮಿತಿ ಹಾಗೂ ಸಾರ್ವಜನಿಕರು ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಕರಗಗಳನ್ನು ನಗರದೊಳಗೆ ಬರ ಮಾಡಿಕೊಳ್ಳಲಾಗುವದು.

ನಾಲ್ಕು ಶಕ್ತಿ ದೇವತೆಗಳ ಪೈಕಿ ಹಿರಿಯ ಅಕ್ಕಳೆಂದೇ ಖ್ಯಾತಿವೆತ್ತಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಿಯಮ್ಮ ಕರಗ ದೇವತೆಗಳು ಸಾಂಪ್ರದಾಯಿಕ ಪೂಜೆಯ ಬಳಿಕ ನಾಡಿನ ಸಭಿಕ್ಷೆಗಾಗಿ ನಗರ ಪ್ರದಕ್ಷಿಣೆ ಹಾಕಲಿದೆ. ಈಗಾಗಲೇ ಕರಗ ಹೋರುವ ವ್ರತಾಧಾರಿಗಳು ಕಳೆದ ಒಂದು ತಿಂಗಳಿನಿಂದ ವ್ರತಾಚರಣೆ ಯಲ್ಲಿದ್ದಾರೆ. ತಾ. 21 ರಿಂದ (ಇಂದಿನಿಂದ) ಒಂಭತ್ತು ದಿನಗಳ ಕಾಲ ಕರಗ ದೇವತೆಗಳು ನಗರದಾದ್ಯಂತ ಸಂಚರಿಸಲಿವೆ. ಭಕ್ತರು,

(ಮೊದಲ ಪುಟದಿಂದ) ಆಸ್ತಿಕರು ತಮ್ಮ ಮನೆಯೆದುರು, ಮಾರ್ಗ ಬದಿ ನಿಂತು ಕರಗ ದೇವತೆಗಳಿಗೆ ಪೂಜೆ ಸಲ್ಲಿಸಿ ನಾಡಿ ಸುಭಿಕ್ಷೆಗಾಗಿ ಪ್ರಾರ್ಥಿಸುತ್ತಾರೆ. ವಿಜಯದಶಮಿ ಯಂದು ಹತ್ತು ದೇವಾಲಯಗಳಿಗೆ ತೆರಳಿ ದಶಮಂಟಪಗಳೊಂದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮರು ದಿನ ಬೆಳಗ್ಗಿನ ಜಾವ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವ ಪೂರ್ಣಗೊಳ್ಳಲಿದೆ.