ಸೋಮವಾರಪೇಟೆ, ಸೆ. 20: ನಗರಕ್ಕೆ ಸಮೀಪವಿರುವ ಕಾನ್ವೆಂಟ್ ಬಾಣೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಇಂದಿಗೂ ದುರಸ್ತಿ ಭಾಗ್ಯ ಕಂಡಿಲ್ಲ. ಶಾಲಾ-ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರು ಈ ರಸ್ತೆಯನ್ನು ಅವಲಂಭಿಸಿದ್ದರೂ ಸಹ ಆಡಳಿತಗಾರರು ಇತ್ತ ಕಡೆ ಗಮನಹರಿಸಿಲ್ಲ.

ಶಾಂತಳ್ಳಿ ಮುಖ್ಯರಸ್ತೆಯ ಆಲೇಕಟ್ಟೆ ಪದ್ಮ ಕ್ಯಾಂಟೀನ್ ಸಮೀಪದಿಂದ ಕಾನ್ವೆಂಟ್ ಬಾಣೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಸಹ ಇಂದಿಗೂ ಗುಂಡಿ ಮುಚ್ಚುವ ಕಾರ್ಯ ನಡೆದಿಲ್ಲ.

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾನ್ವೆಂಟ್ ಬಾಣೆಯಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು ನೆಲೆಸಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳೂ ಸೇರಿದಂತೆ ಒಳಭಾಗದ ರಸ್ತೆಗಳು ಗುಂಡಿಮಯವಾಗಿದೆ.

ಆಲೇಕಟ್ಟೆ ರಸ್ತೆ, ಕಲ್ಕಂದೂರು, ಗಾಂಧಿನಗರ, ಚೌಡ್ಲು, ಕಲ್ಲಾರೆ ಭಾಗದಿಂದ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಕಾನ್ವೆಂಟ್ ಶಾಲೆ, ಸಂತಜೋಸೆಫರ ಕಾಲೇಜಿಗೆ ತೆರಳುತ್ತಿದ್ದು, ಈ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿರುವದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಬಳಸು ದಾರಿಯಲ್ಲಿ ಶಾಲಾ-ಕಾಲೇಜು ತಲುಪಬೇಕಿದೆ.

ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿರುವ ಈ ರಸ್ತೆಯನ್ನು ಆದಷ್ಟು ಶೀಘ್ರ ದುರಸ್ತಿಗೊಳಿಸಲು ಸಂಬಂಧಿಸಿದವರು ಮುಂದಾಗಬೇಕಿದೆ ಎಂದು ಕಾನ್ವೆಂಟ್ ಬಾಣೆ ನಿವಾಸಿಗಳಾದ ಸುರೇಶ್, ಸುನಿಲ್, ಅಣ್ಣಪ್ಪ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.