ಸೋಮವಾರಪೇಟೆ, ಸೆ.20: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸುವ ಹಲವು ಅಭಿವೃದ್ಧಿ ಕಾಮಗಾರಿಗಳ ಕಡತಗಳಿಗೆ ಅನುಮೋದನೆ ನೀಡುವ ಸಂದರ್ಭ ಜಿಲ್ಲಾ ಯೋಜನಾ ನಿರ್ದೇಶಕರು ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇವರ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕೆಂದು ಪ.ಪಂ. ಸದಸ್ಯ ಕೆ.ಎ. ಆದಂ ಆಗ್ರಹಿಸಿದರು.

ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಂಭೀರ ಆರೋಪ ಮಾಡಿದ ಸದಸ್ಯ ಆದಂ, ಯೋಜನಾ ನಿರ್ದೇಶಕರು ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ಹಲವರು ತನ್ನ ಬಳಿ ಹೇಳಿಕೊಂಡಿದ್ದು, ಹಣ ನೀಡದೇ ಇದ್ದಾಗ ಕಡತಗಳ ವಿಲೇವಾರಿ ವಿಳಂಬವಾಗುತ್ತದೆ. ನಮ್ಮ ಪಂಚಾಯಿತಿಯ ಕಡತಗಳ ವಿಳಂಬಕ್ಕೆ ಇದೇ ಕಾರಣ ಎಂದರು.

ಈ ಬಗ್ಗೆ ಅಧ್ಯಕ್ಷರು ತಕ್ಷಣ ಗಮನ ಹರಿಸಬೇಕು; ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಅಧ್ಯಕ್ಷೆ ವಿಜಯಲಕ್ಷ್ಮೀ ಪ್ರತಿಕ್ರಿಯಿಸಿ, ಕಡತಗಳ ವಿಲೇವಾರಿ ಸಂಬಂಧ ಅಧಿಕಾರಿಯ ಜತೆ ಚರ್ಚಿಸಲಾಗುವದು, ನಂತರ ಕ್ರಮ ವಹಿಸಲಾಗುವದು ಎಂದರು.

ಈ ಹಿಂದಿನ ಆಡಳಿತ ಮಂಡಳಿ ನಿರ್ಗತಿಕರಿಗೆ ನಿವೇಶನ ಒದಗಿಸುವ ದೃಷ್ಟಿಯಿಂದ ಪಡೆಯಲಾಗಿದ್ದ ಜಾಗದಲ್ಲಿ ಮೂಲ ಉದ್ದೇಶ ಗಾಳಿಗೆ ತೂರಿ ಅರಸು ಭವನ ನಿರ್ಮಾಣಕ್ಕೆ ಮುಂದಾಗಿರುವದು ಸರಿಯಲ್ಲ. ಭವನ ನಿರ್ಮಾಣಕ್ಕೆ ತಮ್ಮ ವಿರೋಧ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದ ವಿಪಕ್ಷ ಸದಸ್ಯರುಗಳಾದ ಆದಂ, ಶೀಲಾ ಡಿಸೋಜ ಅವರುಗಳು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಬೇಕು ಎಂದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಅಧ್ಯಕ್ಷರು, ಈಗಾಗಲೇ ಟೌನ್ ಪ್ಲಾನಿಂಗ್ ಯೋಜನೆ ರೂಪಿಸಲಾಗಿದೆ. ಇದರಲ್ಲಿ ರಸ್ತೆ, ಉದ್ಯಾನವನ, ಸಮುದಾಯ ಭವನ ಯೋಜನೆಗಳು ಒಳಗೊಂಡಿವೆ ಎಂದರು. ಇದಕ್ಕೆ ಆಕ್ಷೇಪಿಸಿದ ವಿಪಕ್ಷದವರು, ಪಾಳುಬಿದ್ದಿರುವ ಶತಮಾನೋತ್ಸವ ಭವನವನ್ನು ಅರಸು ಭವನವನ್ನಾಗಿ ಪರಿವರ್ತಿಸಿ, ಅದನ್ನೇ ದುರಸ್ತಿ ಮಾಡಿ ಎಂದು ಸಲಹೆ ನೀಡಿದರು.

2 ರಿಂದ 3 ಅಂಗಡಿ ಮಳಿಗೆಗಳನ್ನು ಹೊಂದಿರುವವರೂ ಸಹ ರಸ್ತೆ ಬದಿಯಲ್ಲಿಯೇ ಎಲೆ ಅಡಿಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆದಂ ವ್ಯಂಗ್ಯವಾಡಿದರು. ಹೂವು ಮಾರಾಟ ಮಾಡುವವರಿಗೆ ಪಟ್ಟಣದಲ್ಲಿ ಸೂಕ್ತ ಸ್ಥಳ ಪರಿಶೀಲಿಸಿ ವ್ಯವಸ್ಥೆ ಕಲ್ಪಿಸುವದಾಗಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು. ಪೊಲೀಸ್ ಠಾಣೆಗೆ ತೆರಳುವ ರಸ್ತೆ ಬದಿಯಲ್ಲಿರುವ ಅಪ್ರಯೋಜಕ ನೀರಿನ ಟ್ಯಾಂಕ್‍ನ್ನು ತೆರವುಗೊಳಿಸಿ, ಮಹದೇಶ್ವರ ಬಡಾವಣೆಯಲ್ಲಿ ನಿರ್ಮಿಸಿರುವ ಉದ್ಯಾನವನದಲ್ಲಿ ಮರ ಬಿದ್ದು ತಿಂಗಳುಗಳೇ ಕಳೆದರೂ ಇನ್ನೂ ವಿಲೇವಾರಿ ಮಾಡಿಲ್ಲ. ಇದರೊಂದಿಗೆ ಉದ್ಯಾನವನ ನಿರ್ವಹಣೆಯೂ ಇಲ್ಲದೇ ಪಾಳುಬಿದ್ದಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಇಂದ್ರೇಶ್ ಅವರು ಸಭೆಯಲ್ಲಿ ಒತ್ತಾಯಿಸಿದರು.

ಪಂಚಾಯಿತಿಯ ಪೌರಕಾರ್ಮಿಕರಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡುವ ಉದ್ದೇಶ ಹೊಂದಲಾಗಿತ್ತು. ಅದರಂತೆ ವೈದ್ಯರನ್ನು ಸಂಪರ್ಕಿಸಿದ ಸಂದರ್ಭ ತಾವೇ ಚುಚ್ಚುಮದ್ದು ನೀಡುವದಾಗಿ ತಿಳಿಸಿದರು. ಕಾರ್ಯಕ್ರಮದ ಹಿಂದಿನ ದಿನದವರೆಗೂ ಈ ಬಗ್ಗೆ ತಮಗೆ ಸ್ಪಷ್ಟನೆ ಇರಲಿಲ್ಲ ಎಂದು ಅಧ್ಯಕ್ಷೆ ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರುಗಳು, ತಮಗೆ ನೀಡಿರುವ ಕಾರ್ಯಸೂಚಿಯಲ್ಲಿ ಪಂಚಾಯತಿ ಕಾರ್ಯಕ್ರಮವೆಂದು ತಿಳಿಸಲಾಗಿದೆ. ಮತ್ತೊಂದೆಡೆ ಬಿಜೆಪಿ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮವೆಂದು ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಅಧ್ಯಕ್ಷೆ ವಿಜಯಲಕ್ಷ್ಮೀ ಮಾತನಾಡಿ, ಪೌರಕಾರ್ಮಿಕ ಕುಟುಂಬಕ್ಕೂ ಚುಚ್ಚುಮದ್ದು ಕೊಡಿಸಬೇಕೆಂಬ ಉದ್ದೇಶದಿಂದ ಮಡಿಕೇರಿಯ ವೈದ್ಯರಾದ ನವೀನ್ ಅವರನ್ನು ಸಂಪರ್ಕಿಸಿದ್ದು, ಈ ಕಾರ್ಯದಿಂದ ಪಂಚಾಯಿತಿಗೆ ಹಣ ಉಳಿತಾಯವಾಗಿದೆ. ಅಲ್ಲದೆ ಅಂದು ಕಾಂಗ್ರೆಸ್ ಸದಸ್ಯ ಇಂದ್ರೇಶ್ ಸಹ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ ಎಂದರು.

ಸಭೆಯಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಸುಧಾಕರ್ ಸೇರಿದಂತೆ ಸದಸ್ಯರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.