ಕೂಡಿಗೆ, ಸೆ. 20: ಖಾಸಗಿ ವಿದ್ಯಾಸಂಸ್ಥೆಗಳಂತೆ ಸರ್ಕಾರಿ ಕಾಲೇಜುಗಳಿಗೆ ಹೆಚ್ಚು ಅನುದಾನ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುವದರ ಮೂಲಕ ವಿದ್ಯಾರ್ಜನೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಗೆ ರೂ.2 ಲಕ್ಷ ನೀಡುವದಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ನೀಡಿದರು.

ಕೂಡಿಗೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲೇಜು ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸ ಲಾಗುವದು. ಈಗಾಗಲೇ ಯುವತಿಯರಿಗೆ ಶೌಚಾಲಯವನ್ನು ನಿರ್ಮಾಣ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಯುವಕರಿಗೆ ಶೌಚಾಲಯವನ್ನು ನಿರ್ಮಾಣ ಮಾಡಿಸಲಾಗುವದು ಎಂದರು.

ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಉಪನ್ಯಾಸಕರ ಶ್ರಮವು ಮುಖ್ಯವಾಗಿದೆ. ಈ ಕಾಲೇಜಿನ ಉಪನ್ಯಾಸಕರ ಶ್ರಮಕ್ಕೆ ತಕ್ಕ ಫಲ ವಿದ್ಯಾರ್ಥಿಗಳಿಂದ ಬಂದಿರುವದನ್ನು ಶ್ಲಾಘಿಸಿದರು.

ಈ ಸಂದರ್ಭ ಯುವತಿಯರಿಗೆ ನಿರ್ಮಿಸಲಾದ ನೂತನ ಶೌಚಾಲಯ ವನ್ನು ಶಾಸಕರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್.ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕುಮಾರಸ್ವಾಮಿ ವಹಿಸಿದ್ದರು.

ವೇದಿಕೆಯಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಸಾವಿತ್ರಿ ರಾಜನ್, ಕಾಲೇಜಿನ ಪ್ರಾಂಶುಪಾಲ ಮಹಾಲಿಂಗಯ್ಯ, ಗುತ್ತಿಗೆದಾರ ದೊರೆಸ್ವಾಮಿ, ಹಿರಿಯ ಉಪನ್ಯಾಸಕ ನಾಗಪ್ಪ ಇದ್ದರು.

ಸಮಾರಂಭದಲ್ಲಿ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಶ್ವೇತಕುಮಾರಿ, ಚೈತ್ರ, ಶ್ವೇತ, ಭೂಮಿಕಾ, ಉಷಾ ಇವರುಗಳನ್ನು ಸನ್ಮಾನಿಸಲಾಯಿತು.