ಗೋಣಿಕೊಪ್ಪಲು, ಸೆ. 20: ಶೋಭಾಯಾತ್ರೆಯಂದು ಸ್ಪರ್ಧಾತ್ಮಕ ತೇರು ಅನಾವರಣಗೊಳಿಸುವ ಮೂಲಕ ಗೋಣಿಕೊಪ್ಪ ದಸರಾದಲ್ಲಿ ಮಂಟಪ ಪೈಪೋಟಿ ನೀಡಲಾಗುವದು ಎಂದು ಕೈಕೇರಿ ಭಗವತಿ ಯುವ ದಸರಾ ಸಮಿತಿ ಅಧ್ಯಕ್ಷ ಚಿಯಕ್‍ಪೂವಂಡ ಸುಬ್ರಮಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ 10 ವರ್ಷದಿಂದ ಗೋಣಿಕೊಪ್ಪ ದಸರಾದಲ್ಲಿ ನಡೆಯುವ ಶೋಭಾಯಾತ್ರೆ ಸಂದರ್ಭ ಮಂಟಪ ಅನಾವರಣಗೊಳಿಸುವ ಮೂಲಕ ಕಲಾಭಿಮಾನಿಗಳಿಗೆ ಹಲವು ಕಲಾಕೃತಿ ಪರಿಚಯ ಮಾಡಲಾಗಿತ್ತು. ಇದರಂತೆ ಈ ಬಾರಿಯೂ ಕೂಡ ಪೈಪೋಟಿಯಲ್ಲಿ ಪಾಲ್ಗೊಳ್ಳಲಾಗುವದು.

ಪೈಪೋಟಿಯಲ್ಲಿ 2 ಬಾರಿ ದ್ವಿತೀಯ ಸ್ಥಾನ, 1 ಬಾರಿ ತೃತೀಯ ಸ್ಥಾನ ಲಭಿಸಿದೆ. ವರ್ಷಂಪ್ರತಿ ಉತ್ತಮ ಮಂಟಪದ ಮೂಲಕ ಕಥೆಗಳನ್ನು ನೀಡಲಾಗಿದೆ. ಈ ಬಾರಿ ಬರಗಾಲ ಸಂದರ್ಭವಾಗಿದ್ದರೂ ಸರಳವಾಗಿ ಮಂಟಪ ಅನಾವರಣಗೊಳಿಸಲಾಗುವದು. ಸುಮಾರು 3 ಲಕ್ಷ ಹಣ ಖರ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಕಾವೇರಿ ದಸರಾ ಸಮಿತಿ 70 ಸಾವಿರ ನೀಡುವ ಭರವಸೆ ನೀಡಿದೆ. ಮಂಟಪ ಸಮಿತಿಗಳಿಗೆ ನೀಡುವ ಮೊತ್ತವನ್ನು ಹೆಚ್ಚಿಸುವದು ಉತ್ತಮ. ಬರಗಾಲವಾಗಿರುವದರಿಂದ ಜನರಿಂದ ಹೆಚ್ಚಿನ ಪ್ರೋತ್ಸಾಹ ನಿರೀಕ್ಷಿಸುವದು ಅಸಾಧ್ಯವಾಗಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಮಾಜಿ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ, ಕಾರ್ಯದರ್ಶಿ ಕೊಕ್ಕಂಡ ಧರ್ಮಜ, ಖಜಾಂಚಿ ಪಡಿಕಲ್ ಯಧು, ಪದಾಧಿಕಾರಿ ಸುಂದರ ಉಪಸ್ಥಿತರಿದ್ದರು.