ಗೋಣಿಕೊಪ್ಪಲು, ಸೆ. 20: ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ 1956 ರಲ್ಲಿ ಈ ಭಾಗದ ಆದಿವಾಸಿಗಳು ಹಾಗೂ ಗ್ರಾಮೀಣ ಭಾಗದ ಜನತೆಯ ಆರೋಗ್ಯಕ್ಕಾಗಿ ಆರಂಭಗೊಂಡಿದ್ದು, ಇದೀಗ ಬೆಂಗಳೂರಿನ ಖಾಸಗಿ ಸಂಸ್ಥೆಯ ವಶಕ್ಕೆ ಸದ್ದಿಲ್ಲದೆ ನಿರ್ವಹಣೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ವಹಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಭಾಗದ ಸುಮಾರು 5 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರು, ಜನಪ್ರತಿನಿಧಿಗಳು, ಜಿ.ಪಂ., ತಾ.ಪಂ.ಸದಸ್ಯರ ವಿರೋಧದ ನಡುವೆಯೂ ಇತ್ತೀಚೆಗೆ ನಿವೃತ್ತಗೊಂಡ ಜಿಲ್ಲಾ ಆರೋಗ್ಯಾಧಿಕಾರಿ ನಡೆಯ ಬಗ್ಗೆ ಈ ಭಾಗದ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ‘ಉದ್ಭವ’ ಸಂಸ್ಥೆಯ ಕೊಳ್ಳೆಗಾಲ ನಿವಾಸಿ, ಸಂಸ್ಥೆಯ ಅಧ್ಯಕ್ಷೆ ಹಾಗೂ ಪ್ರಮುಖರು ಜಿ.ಪಂ.ಸದಸ್ಯ ಬಿ.ಎನ್. ಪ್ರಥ್ಯು ಅವರ ಮನೆಯ ಮುಂಭಾಗ ಹಾಜರಾಗಿ ಧಮಕಿ ಹಾಕಿದ ಪ್ರಸಂಗವೂ ನಡೆದಿದೆ.

ಸುಮಾರು 6 ಹಾಸಿಗೆ ವ್ಯವಸ್ಥೆ ಇರುವ ಬಾಳೆಲೆ ಆಸ್ಪತ್ರೆ ಈ ಭಾಗದ ಜನತೆಗೆ ಉತ್ತಮ ಸೇವೆಯನ್ನೇ ನೀಡುತ್ತಾ ಬಂದಿದೆ. ಇತ್ತೀಚೆಗಿನ ವರ್ಷಗಳಲ್ಲಿ ಆಸ್ಪತ್ರೆಯು ವೈದ್ಯರ ಕೊರತೆಯನ್ನು ಎದುರಿಸಿತ್ತು. ಅಗತ್ಯ ಸಿಬ್ಬಂದಿ ಕೊರತೆಯಿಂದಾಗಿ ವಿವಾದಕ್ಕೂ ಕಾರಣವಾಗಿತ್ತು. ಹೀಗಿದ್ದೂ ಅಲ್ಲಿನ ಶುಶ್ರೂಷಕಿಯರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ನಡುವೆ ವೈದ್ಯರ ಕೊರತೆ ಹಿನ್ನೆಲೆ ಮೈಸೂರಿನ ಆಯುಷ್ ವೈದ್ಯ ಡಾ. ಪ್ರತಾಪ್ ಕಳೆದ 11 ತಿಂಗಳಿನಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು ಉತ್ತಮ ಅಭಿಪ್ರಾಯವಿದೆ. ಕೇವಲ 4-5 ಸಿಬ್ಬಂದಿಗಳ ಸಹಕಾರ ದೊಂದಿಗೆ ಗ್ರಾಮೀಣ ಭಾಗದ ರೋಗಿ ಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಜಿಲ್ಲಾ ಆರೋಗ್ಯ ಇಲಾಖೆ ಈ ಭಾಗದ ಜನತೆಯ, ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಬೆಂಗಳೂರಿನ ಉದ್ಭವ್ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ)ಗೆ ಸರ್ಕಾರಿ ಆಸ್ಪತ್ರೆ ನಿರ್ವಹಣೆ ನೀಡಿರುವದು ವಿವಾದಕ್ಕೆ ಕಾರಣವಾಗಿದೆ.

ಹೊರಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿರನ್ನು ಮೂರು ತಿಂಗಳಿಗೆ ಮೊದಲೇ ಇಲ್ಲಿನ ಖಾಸಗಿ ವ್ಯಕ್ತಿಯ ಬಾಡಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ಬಿಡಲಾಗಿದೆ. ಕಳೆದ ವಾರದಿಂದ ಆಡಳಿತಾಧಿಕಾರಿ ಪ್ರಭಾಕರ್ ನೇಮ ಕಾತಿಯೊಂದಿಗೆ, ಪ್ರಯೋಗಾಲಯ ತಜ್ಞರೂ ದಿಢೀರ್ ಆಗಮಿಸಿ ಕಾರ್ಯೋನ್ಮುಖರಾಗಿದ್ದಾರೆ, ಮೂರ್ನಾಲ್ಕು ಮಹಿಳಾ ಸಿಬ್ಬಂದಿಗಳಿಗೆ ಇನ್ನೂ ವಸತಿ ವ್ಯವಸ್ಥೆ ಆಗದಿದ್ದರೂ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಲ್ಲಿನ ಖಾಯಂ ಸರ್ಕಾರಿ ಶುಶ್ರೂಷಕಿಯರ ಸರ್ಕಾರಿ ವಸತಿ ನಿಲಯ ತೆರವಿಗೆ ಒತ್ತಡ ಆರಂಭವಾಗಿದೆ. ಕಳೆದ ಹಲವು ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದ್ದ ಚಂದ್ರಾವತಿ ಎಂಬ ಶುಶ್ರೂಷಕಿ ಈಗಾಗಲೇ ಮೂರ್ನಾಡುವಿಗೆ ವರ್ಗಾವಣೆ ಗೊಂಡಿದ್ದಾರೆ. ಜಿ.ಪಂ. ಸಾಮಾನ್ಯ ಸಭೆಯಲ್ಲಿ ಎರಡು ಬಾರಿ ಈ ಭಾಗದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಬಾಳೆಲೆ ಸರ್ಕಾರಿ ಆಸ್ಪತ್ರೆ ಖಾಸಗಿ ಒಡೆತನಕ್ಕೆ ಒಪ್ಪಿಸಲು ತನ್ನ ವಿರೋಧ ಇರುವದಾಗಿಯೂ ನಿಲುವನ್ನು ವ್ಯಕ್ತಪಡಿಸಿದ್ದರು. ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ. ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಭೇಟಿ ನೀಡಿದಾಗಲೂ ಖಾಸಗಿ ಸಂಸ್ಥೆಗೆ ಹಸ್ತಾಂತರಿಸದಂತೆ ವಿರೋಧ ವ್ಯಕ್ತಪಡಿಸಲಾಗಿತ್ತು.

ಬಾಳೆಲೆ ಸರ್ಕಾರಿ ಆಸ್ಪತ್ರೆಗೆ ಸುಮಾರು ‘ಡಿ’ ಗ್ರೂಫ್ ನೌಕರರೂ ಒಳಗೊಂಡಂತೆ ಸುಮಾರು 20 ಮಂದಿ ಸಿಬ್ಬಂದಿಯ ಅವಶ್ಯಕತೆ ಇತ್ತು. ಕಳೆದ ಹಲವು ವರ್ಷಗಳಿಂದ ಕೇವಲ 6-7 ಸಿಬ್ಬಂದಿಗಳೇ ಇಡೀ ಆಸ್ಪತ್ರೆಯನ್ನು ಉತ್ತಮವಾಗಿ ನಿಭಾಯಿಸುತ್ತಾ ಬಂದಿದ್ದರು. ಅಗತ್ಯ ಸಿಬ್ಬಂದಿ ನೇಮಕ ಮಾಡದ ಹಿನ್ನೆಲೆ ಅಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೂ ದೂರು ನೀಡಲಾಗಿತ್ತು.

ಸೂರ್ಲಬ್ಬಿಯಿಂದ ಓಡಿಸಲಾದ ಸಂಸ್ಥೆ ಬಾಳೆಲೆಗೆ!?

ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಕಾಂಡೇರ ಕುಸುಮಾ, ಉಪಾಧ್ಯಕ್ಷ ರಂಜನ್ ಮಹೇಶ್, ಮಾಜಿ ಗ್ರಾ.ಪಂ. ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಗ್ರಾ.ಪಂ. ಸದಸ್ಯ ಪೆÇೀಡಮಾಡ ಸುಖೇಶ್ ಭೀಮಯ್ಯ ಮುಂತಾದವರು ತಾ. 18 ರಂದು ಬಾಳೆಲೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಂದರ್ಭ ಹಲವಾರು ಹೊಸ ಸಿಬ್ಬಂದಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವದು ಕಂಡು ಬಂತು. ಈ ಹಂತದಲ್ಲಿ ಬಿ.ಎನ್. ಪ್ರಥ್ಯು ಹಾಗೂ ಗ್ರಾ.ಪಂ. ಉಪಾಧ್ಯಕ್ಷ ರಂಜನ್ ಅವರು ಆಡಳಿತಾಧಿಕಾರಿ ಪ್ರಭಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ಜರುಗಿತು. ಉದ್ದೇಶಿತ ಬಾಳೆಲೆ ಆಸ್ಪತ್ರೆ 1956ರಲ್ಲಿ ನಿರ್ಮಾಣಗೊಂಡಿದ್ದು ಸುಮಾರು ನಾಲ್ಕೂವರೆ ಎಕರೆ ಜಾಗ ಇನ್ನೂ ಆಸ್ಪತ್ರೆ ಸುಪರ್ದಿಗೆ ದಾಖಲೆಯಾಗಿಲ್ಲ. ಒಂದೊಮ್ಮೆ ಉದ್ಭವ ಸಂಸ್ಥೆಗೆ ಆಡಳಿತವನ್ನು ಒಪ್ಪಿಸಿದ್ದೇ ಆದಲ್ಲಿ ಸರ್ಕಾರಿ ಆಸ್ಪತ್ರೆಗೆ ಬೇಲಿ ಹಾಕಲಾಗುವದು ಎಂದು ಆದೇಂಗಡ ವಿನು ಉತ್ತಪ್ಪ, ಸತೀಶ್ ದೇವಯ್ಯ ಎಚ್ಚರಿಸಿದ ಘಟನೆಯೂ ನಡೆಯಿತು.

ಸೂರ್ಲಬ್ಬಿ ಸರ್ಕಾರಿ ಆಸ್ಪತ್ರೆಯನ್ನು ಇದೇ ಉದ್ಭವ ಸಂಸ್ಥೆಗೆ ನೀಡಲಾಗಿದ್ದು, ಮಾಸಿಕ ವೇತನ ವಿಳಂಬ ಹಾಗೂ ಸ್ತ್ರೀ ಸಂಘಗಳು, ಸಾರ್ವಜನಿಕ ಪ್ರತಿಭಟನೆ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ದಿಢೀರ್ ಭೇಟಿ ಹಾಗೂ ಪರಿಶೀಲನೆಯ ನಂತರ ಉದ್ಭವ ಸಂಸ್ಥೆಯ ವಶದಿಂದ ಆಸ್ಪತ್ರೆಯನ್ನು ಮುಕ್ತಗೊಳಿಸಲಾಗಿತ್ತು.

ಉದ್ದೇಶಿತ ಬಾಳೆಲೆ ಸರ್ಕಾರಿ ಆಸ್ಪತ್ರೆಯನ್ನು ಉದ್ಭವ ಸಂಸ್ಥೆಗೆ ವಹಿಸುವ ಸಂದರ್ಭ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯುವಿಗೆ ರೂ. 1 ಲಕ್ಷ ಲಂಚ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ರಂಜನ್‍ಗೆ ರೂ. 50 ಸಾವಿರ ಲಂಚ ನೀಡಲಾಗಿದೆ ಎಂಬ ಸಾರ್ವಜನಿಕರ ಆರೋಪವೂ ಪ್ರಸ್ತಾಪವಾಗಿ ಇಬ್ಬರು ಜನಪ್ರತಿನಿಧಿಗಳು ಆಡಳಿತಾಧಿಕಾರಿ ಪ್ರಭಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ತಾನು ಜಿ.ಪಂ. ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ತನ್ನ ಮಾಯಮುಡಿ ನಿವಾಸಕ್ಕೆ ತಮ್ಮ ಬೆಂಬಲಿಗರೊಂದಿಗೆ ಬಂದು ತಮ್ಮನ್ನು ನಿಂದಿಸಿ, ಹಲವರು ಬೆದರಿಕೆ ಹಾಕಿದ್ದಾರೆ. ಇದೀಗ ತನ್ನ ಮೇಲೆ ಲಂಚದ ಆರೋಪವನ್ನು ಹೊರಿಸಿ ಅವಮಾನಿಸುವ ಪ್ರಯತ್ನ ನಡೆದಿದೆ. ಮುಂದಿನ 15 ದಿನದ ಅವಧಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಉದ್ಭವ್ ಸಂಸ್ಥೆಯ ಹಿಡಿತದಿಂದ ಬಾಳೆಲೆ ಸರ್ಕಾರಿ ಆಸ್ಪತ್ರೆಯನ್ನು ಕೂಡಲೇ ತೆರವು ಗೊಳಿಸಬೇಕು. ಇಲ್ಲವೇ ಬಾಳೆಲೆ, ನಿಟ್ಟೂರು, ಪೆÇನ್ನಪ್ಪಸಂತೆ, ಮಾಯಮುಡಿ, ಕಿರುಗೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಎಲ್ಲ ಜನಪ್ರತಿನಿಧಿಗಳು, ಸಾರ್ವಜನಿಕರನ್ನು ಸಂಘಟಿಸಿ ಪ್ರತಿಭಟನೆ ಹಮ್ಮಿ ಕೊಳ್ಳುವದಾಗಿ ತಿಳಿಸಿದ್ದಾರೆ.

ಮಾಜಿ ಗ್ರಾ.ಪಂ. ಅಧ್ಯಕ್ಷ ವಿನು ಉತ್ತಪ್ಪ ಅವರು ಮಾತನಾಡಿ, ಬಾಳೆಲೆ ಆಸ್ಪತ್ರೆ ವಿವಾದವನ್ನು ಜಿಲ್ಲಾ ಆರೋಗ್ಯ ಇಲಾಖೆಯೇ ಪರಿಹರಿಸಬೇಕಾಗಿದೆ. ಕೂಡಲೇ 5 ಗ್ರಾ.ಪಂ. ಮಟ್ಟದ ಅಧ್ಯಕ್ಷರು, ಉಪಾಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಭೆ ಕರೆದು ತೀರ್ಮಾನ ಕೈಗೊಳ್ಳಲಿ. ಇದೀಗ ಹಿಂಬಾಗಿಲಿನಿಂದ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಹುನ್ನಾರ ನಡೆದಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದ್ದು ತನಿಖೆಯಾಗ ಬೇಕಾಗಿದೆ. ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು, ಶುಶ್ರೂಷಕಿಯರು, ಡಿ ಗ್ರೂಫ್ ನೌಕರರನ್ನು ನಿಯೋಜಿಸಲಿ. ಇಲ್ಲವೇ ಸ್ಥಳೀಯ ಆರೋಗ್ಯ ಸಹಾಯಕಿ ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಿ. ಇದರಿಂದ ಸರ್ಕಾರದ ಬೊಕ್ಕಸದ ಹಣವೂ ಉಳಿತಾಯ ವಾಗುತ್ತದೆ. ಇಲ್ಲವೇ ಆಸ್ಪತ್ರೆಗೆ ಬೇಲಿ ಹಾಕುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

- ಟಿ.ಎಲ್. ಶ್ರೀನಿವಾಸ್