ಮಡಿಕೇರಿ, ಸೆ. 21: ಮಡಿಕೇರಿ ತಾಲೂಕು ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಕೆಲವು ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗಳು ರೋಗಿಗಳೊಂದಿಗೆ ಮತ್ತು ಅವರ ಸಂಬಂಧಿಕರೊಂದಿಗೆ ಉಡಾಫೆಯಿಂದ ವರ್ತಿಸುತ್ತಿದ್ದು, ಸಾಮಾನ್ಯ ಜನತೆಗೆ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ತಾ.ಪಂ. ಅಧ್ಯಕ್ಷರಾದಿಯಾಗಿ ಸದಸ್ಯರಿಂದ ಗಂಭೀರ ಆರೋಪ ಕೇಳಿ ಬಂದಿತು.
ಮಡಿಕೇರಿ ತಾ.ಪಂ. ಸಾಮಾನ್ಯ ಸಭೆ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿಂದು ನಡೆಯಿತು. ಸದಸ್ಯ ಕೊಡಪಾಲು ಗಣಪತಿ ವಿಷಯ ಪ್ರಸ್ತಾಪಿಸಿ ಮಾತನಾಡಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಇತ್ತೀಚೆಗೆ ಮದೆನಾಡಿನ ರೋಗಿ ಯೊಬ್ಬರು ತುರ್ತು ಚಿಕಿತ್ಸೆಗೆ ತುರ್ತು ವಿಭಾಗಕ್ಕೆ ಬಂದಿದ್ದಾಗ ಚೀಟಿ ಮಾಡಿಸಿಕೊಂಡು ಬನ್ನಿ ಎಂದು ನಿರ್ಲಕ್ಷ್ಯತನದಿಂದ ಮತ್ತು ಉಡಾಫೆ ಯಿಂದ ವೈದ್ಯರು ವರ್ತಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದ ಪರಿಣಾಮವಾಗಿ ರೋಗಿಯು ಬಳಿಕ ನಿಧನ ಹೊಂದಿದ್ದಾರೆ. ತುರ್ತು ವಿಭಾಗಕ್ಕೆ ತುರ್ತು ಚಿಕಿತ್ಸೆಗೆ ಬಂದಾಗ ರೋಗಿಗಳನ್ನು ಪರೀಕ್ಷಿಸುವ ಮೂಲಕ ವೈದ್ಯರು ಮಾನವೀಯತೆ ತೋರಬೇಕು. ಆದರೆ ಆಸ್ಪತ್ರೆಗಳಲ್ಲಿ ಮಾನವೀಯತೆ ಮರೆಯಾಗಿದೆ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಗಾದೆ ಮಾತಿನಂತೆ ಸಿಬ್ಬಂದಿಗಳು ವರ್ತಿಸುತ್ತಿದ್ದಾರೆ. ಕೆಲವು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಹಣ ನೀಡಿದಲ್ಲಿ ಮಾತ್ರ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಅಂತಹ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಕಂಡು ಬರುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಈ ಸಂದರ್ಭ ತಾ.ಪಂ. ಅಧ್ಯಕ್ಷರಾದಿಯಾಗಿ ಉಪಾಧ್ಯಕ್ಷರು ಹಾಗೂ ಸದಸ್ಯರು ಧ್ವನಿಗೂಡಿಸಿ ಆಸ್ಪತ್ರೆಗಳ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಉಪಾಧ್ಯಕ್ಷ ಬೊಳಿಯಾಡಿರ ಸುಬ್ರಮಣಿ ಹಾಗೂ ಸದಸ್ಯ ದಬ್ಬಡ್ಕ ಶ್ರೀಧರ್ ಆಸ್ಪತ್ರೆ ದಾದಿಯರು ತಾವೇ ವೈದ್ಯರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ನಾಪೋಕ್ಲು ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದ್ದು, ಇರುವ ಮಹಿಳಾ ವೈದ್ಯರೊಬ್ಬರಿಗೆ ಒತ್ತಡ ಹೆಚ್ಚಾಗಿದೆ. ಶೀಘ್ರ ತಜ್ಞ ವೈದ್ಯರನ್ನು ನೇಮಕ ಗೊಳಿಸುವಂತೆ ಸದಸ್ಯೆ ಉಮಾಪ್ರಭು ಆಗ್ರಹಿಸಿದರು. ಕುಂದಚೇರಿ ಆರೋಗ್ಯ ಕೇಂದ್ರಕ್ಕೆ ನೇಮಕಗೊಂಡಿರುವ ವೈದ್ಯರು ಸ್ಥಾನೀಯವಾಗಿ ವಾಸ ಮಾಡದೆ ಭಾಗಮಂಡಲದಲ್ಲಿ ಮನೆ ಮಾಡಿ ವಾಸ ಮಾಡುತ್ತಿದ್ದಾರೆ. ತುರ್ತು ಸಂದರ್ಭ ಇಲ್ಲಿನ ರೋಗಿಗಳನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯ ಬೇಕಾದ ಅನಿವಾರ್ಯತೆಯಿದೆ ಎಂದು ಸದಸ್ಯ ಶ್ರೀಧರ್ ಅಸಮಾಧಾನ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ಆರೋಗ್ಯದಲ್ಲಿ ಹಿಂದಿದ್ದು, ಈ ಹಿನ್ನೆಲೆಯಲ್ಲಿ ಅ. 2 ರಿಂದ ರಾಜ್ಯದಲ್ಲಿ ಮಾತೃಪೂರ್ಣ ಯೋಜನೆ ಜಾರಿಗೆ ಬರುತ್ತಿದೆ. ಈ ಯೋಜನೆಯಿಂದ ಬಾಣಂತಿಯರು, ಗರ್ಭಿಣಿಯರು ಹಾಗೂ ಮಗುವಿನ ಆರೋಗ್ಯ ವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗುವದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ತಿಳಿಸಿದರು.
ಕೆಲವು ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಸದಸ್ಯ ಗಣಪತಿ ಸಭೆಯ ಗಮನಕ್ಕೆ ತಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಮುದ್ದಂಡ ರಾಯ್ ತಿಮ್ಮಯ್ಯ ಅಧಿಕಾರಿಗಳು ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ನೀಡುವಂತೆ ಸಲಹೆ ನೀಡಿದರು. ಗ್ರಾ.ಪಂ. ಪಿಡಿಓಗಳನ್ನು ಅಂಗನವಾಡಿಗೆ ಭೇಟಿ ನೀಡುವಂತೆ ಜವಾಬ್ದಾರಿ ನೀಡುವಂತೆ ಶ್ರೀಧರ್ ಸಲಹೆ ಮಾಡಿದರು.
ತಾಲೂಕಿನ ಹಲವು ಶಾಲೆಗಳು ಶಿಥಿಲಗೊಂಡಿದ್ದು, ದುರಸ್ತಿ ಮಾಡುವದಕ್ಕೆ ಕ್ರಮಕೈಗೊಳ್ಳುವಂತೆ ಸದಸ್ಯ ಬಿ.ವೈ. ರವೀಂದ್ರ ಆಗ್ರಹಿಸಿದರು. ಕಾರುಗುಂದ ಶಾಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬಯಲು ರಂಗಮಂದಿರ ಅರ್ಧದಲ್ಲಿ ನಿಂತಿದೆ. ಪೂರ್ಣಗೊಳಿಸುವಂತೆ ಗಣಪತಿ ಆಗ್ರಹಿಸಿದರು. ತಾಲೂಕಿನಲ್ಲಿ ಇತ್ತೀಚೆಗೆ ಮಳೆ - ಗಾಳಿಗೆ ಸುಮಾರು 437 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 9 ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿವೆ. ಆ ಪೈಕಿ 2 ನೂತನ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದೆ ಎಂದು ಸೆಸ್ಕ್ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಸದಸ್ಯೆ ಕುಮುದಾ ಉಡೋತ್ಮೊಟ್ಟೆಯ ಅಂಗನವಾಡಿ ಸಮೀಪದಲ್ಲಿರುವ ವಿದ್ಯುತ್ ಕಂಬವನ್ನು ಬದಲಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ವಿದ್ಯುತ್ ಬಿಲ್ ಒಮ್ಮೆಗೆ 5000, 1000 ಬರುತ್ತಿದ್ದು, ತಿಂಗಳಿಗೊಮ್ಮೆ ಪಾವತಿಯ ವ್ಯವಸ್ಥೆ ಮಾಡುವಂತೆ ಸದಸ್ಯೆ ಇಂದಿರಾ ಹರೀಶ್ ಅಧಿಕಾರಿಯ ಗಮನಕ್ಕೆ ತಂದರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಟಿ.ಎನ್. ಜೀವನ್ಕುಮಾರ್, ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.