ಶ್ರೀಮಂಗಲ, ಸೆ. 21: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಸಿಎಂ) ಯಲ್ಲಿ ನಡೆದಿರುವ ವಿಯೆಟ್ನಾಂ ದೇಶದ ಕಳಪೆ ಕರಿಮೆಣಸು ಆಮದು ಹಾಗೂ ಕಲಬೆರಕೆ ಪ್ರಕರಣದಿಂದ ಕೊಡಗಿನ ಕೆರಿಮೆಣಸು ಬೆಳೆಗಾರರಿಗೆ ಅನ್ಯಾಯವಾಗಿದ್ದು, ಈ ಪ್ರಕರಣದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಕೊಡಗು ಬೆಳೆಗಾರ ಒಕ್ಕೂಟದ ನಿಯೋಗ ಬೆಂಗಳೂರಿನಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಡಿಜಿಪಿ ಎಂ.ಎನ್. ರೆಡ್ಡಿ ಆವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.ಎಪಿಸಿಎಂಯ ಕಾವೇರಿ ಎಂಟರ್‍ಪ್ರೈಸಸ್, ಜೈ ಬಾಳಾಜಿ ಭಂಡಾರ್, ರೋಸ್ ಮೇರಿ ಇಂಟರ್‍ನ್ಯಾಷನಲ್ ಸಂಸ್ಥೆಗಳ ಮಾಲೀಕರಾದ ಸೌರವ್ ಬಂಕ, ಜತೀನ್ ಷಾ ಎಂಬವರು ಸುಮಾರು 200 ಟನ್ ಕರಿಮೆಣಸನ್ನು ವಿಯೆಟ್ನಾಂ ದೇಶದಿಂದ ಆಮದು ಮಾಡಿಕೊಂಡು ಇದನ್ನು ಕೊಡಗಿನ ಕರಿಮೆಣಸಿನೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಿರುವ ಬಗ್ಗೆ ಪ್ರಸ್ತಾಪಿಸಿದರು. ಭ್ರಷ್ಟಾಚಾರ, ತೆರಿಗೆ, ವಂಚನೆ,

(ಮೊದಲ ಪುಟದಿಂದ) ಕಾನೂನು ಉಲ್ಲಂಘನೆ, ಆಹಾರ ಕಲಬೆರಕೆ, ಸಾರ್ಕ್ ಮತ್ತು ಸಾಫ್ಟಾ ಒಪ್ಪಂದ ದುರ್ಬಳಕೆ, ಅಂತ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕ ರಾಸಾಯನಿಕ ಬಳಕೆಯಿಂದ ತಿರಸ್ಕøತ ವಾದ ವಿಯೆಟ್ನಾಂ ಕರಿಮೆಣಸು ಬಳಕೆ ಇತ್ಯಾದಿ ವಿವರಗಳನ್ನು 65 ಪುಟಗಳ ದಾಖಲೆ ಸಹಿತ ದೂರು ಸಲ್ಲಿಸಲಾಯಿತು.

ಈ ಬಗ್ಗೆ ಸಚಿವ ಕಾಗೋಡು ತಿಮ್ಮಪ್ಪ ತೋಟಗಾರಿಕೆ ಮತ್ತು ಕೃಷಿ ಮಾರಾಟ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸುವಂತೆ ತಾವು ಸಹ ಅವರೊಂದಿಗೆ ಹಾಗೂ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸುವದಾಗಿ ತಿಳಿಸಿದರು.

ಎಸಿಬಿಯ ಡಿಜಿಪಿ ಎಂ.ಎನ್. ರೆಡ್ಡಿ ಅವರು ಒಕ್ಕೂಟದಿಂದ ಸಲ್ಲಿಸಿದ ದೂರನ್ನು ಪರಿಶೀಲಿಸಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳುವಂತೆ ಎಸಿಬಿಯ ಡಿಜಿ ಕೆ.ವಿ. ಶರತ್‍ಚಂದ್ರ ಅವರಿಗೆ ನಿರ್ದೇಶಿಸಿದರು.

ಇದಲ್ಲದೆ, ಕಂದಾಯ ಸಚಿವರಲ್ಲಿ 2014-15ರ ಅತಿವೃಷ್ಟಿ ಬೆಳೆ ಪರಿಹಾರ ಬಿಡುಗಡೆ, ಪಾಳುಬಿದ್ದ ಭತ್ತದ ಗದ್ದೆ ಅಧ್ಯಯನ ನಡೆಸಿ, ಅವುಗಳ ಮರುಕೃಷಿಗೆ ಉತ್ತೇಜನ, ಆರ್‍ಟಿಸಿ ಬೆಳೆ ಕಲಂ, ಕಾಫಿ, ಕರಿಮೆಣಸು ನಮೂನೆ, ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗ ತೆರವಿಗೆ ಮುಂದಾಗದೇ ಸಕ್ರಮಗೊಳಿಸಲು ಮತ್ತು ಖಾಲಿ ಉಳಿದಿರುವ ಸರಕಾರಿ ಪೈಸಾರಿ ಜಾಗಗಳನ್ನು ಮಾಜೀ ಸೈನಿಕರು ಹಾಗೂ ಅವರ ವಿಧವಾ ಪತ್ನಿಯರಿಗೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಿತು. ಈ ಬಗ್ಗೆ ಕೊಡಗು ಜಿಲ್ಲೆಯ ಈ ವಿಚಾರಗಳನ್ನು ವಿಶೇಷ ಆದ್ಯತೆ ಮೇರೆಗೆ ಪರಿಗಣಿಸುವಂತೆ ಭರವಸೆ ನೀಡಿದರು.

ಎಸಿಬಿಯ ಡಿಜಿಪಿ ಭೇಟಿಗೆ ಹಿರಿಯ ಮುಖಂಡ ಬ್ರಿಜೇಶ್ ಕಾಳಪ್ಪ, ಕಂದಾಯ ಸಚಿವರ ಭೇಟಿಗೆ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ, ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮೂಲಕ ಭೇಟಿ ಮಾಡಿ ಚರ್ಚಿಸಲು ಅವಕಾಶ ಕಲ್ಪಿಸಿದರು. ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷÀ ಕೈಬೀಲಿರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಉಪಸ್ಥಿತರಿದ್ದರು.