ಮಡಿಕೇರಿ, ಸೆ. 21: ಕೊಡಗು ಸೇರಿದಂತೆ ಕರ್ನಾಟಕದ ಆದಿವಾಸಿ ಜನಾಂಗಕ್ಕೆ ಮಳೆಗಾಲದ ಜೂನ್ ತಿಂಗಳಿನಿಂದ ನವೆಂಬರ್ ತನಕ ಆರು ತಿಂಗಳು ಪೌಷ್ಠಿಕ ಆಹಾರ ಪೂರೈಸಲು, ಸರಕಾರದಿಂದ ಏಪ್ರಿಲ್ 15ರಂದು ಆದೇಶಿಸಲಾಗಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು 9.8.2017ರಂದು ಆಗಸ್ಟ್ನಲ್ಲಿ ಟೆಂಡರ್ದಾರರಿಗೆ ರವಾನಿಸಿದ್ದಾರೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಗಿರಿಜನರಿಗೆ ನೀಡಿದ ಮಾನವೀಯ ನೆರವು ನುಂಗಿದ ದಾನವರು’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಸಂಬಂಧಿಸಿದಂತೆ ಈ ಇಲಾಖೆಯ ಅಧಿಕಾರಿ ಪ್ರಕಾಶ್ ಕೆಳಕಂಡ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ ಮಳೆಗಾಲದ 6 ತಿಂಗಳಲ್ಲಿ ಅಂದರೆ ಜೂನ್ನಿಂದ ನವೆಂಬರ್ 2017 ಮಾಹೆಯವರೆಗೆ ಆಹಾರ ಪದಾರ್ಥಗಳನ್ನು ವಿತರಿಸಬೇಕಾಗಿದ್ದು, 2017-18ನೇ ಸಾಲಿಗೆ ವಿತರಿಸುವ ಸಂಬಂಧ ದಿ. 15.04.2017ರಂದು ಸರ್ಕಾರದಿಂದ ಅನುಮತಿ ದೊರೆತಿದ್ದು, ನಂತರದಲ್ಲಿ ಇ-ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿ (2 ತಿಂಗಳ ಅವಧಿ ನೀಡಿ) ಯಶಸ್ವಿಯಾದ ಟೆಂಡರ್ದಾರರಿಗೆ ಪರಿಶಿಷ್ಟ ಪಂಗಡದ ಜೇನುಕುರುಬ, ಯರವ, ಸೋಲಿಗ ಮತ್ತು ಕಾಡುಕುರುಬ ಜನಾಂಗದವರಿಗೆ ಪೌಷ್ಠಿಕ ಆಹಾರ ಪದಾರ್ಥಗಳಾದ ಅಕ್ಕಿ 15 ಕೆ.ಜಿ., ತೊಗರಿಬೇಳೆ 5 ಕೆ.ಜಿ., ಹುರುಳಿ ಕಾಳು 3 ಕೆ.ಜಿ., ಹೆಸರುಕಾಳು 2 ಕೆ.ಜಿ., ಎಣ್ಣೆ (2 ಲೀ.), ಸಕ್ಕರೆ 4 ಕೆ.ಜಿ., ಮೊಟ್ಟೆ 45 ಹಾಗೂ 1 ಕೆ.ಜಿ. ನಂದಿನಿ ತುಪ್ಪವನ್ನು ವಿತರಣೆ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು ದಿ. 01.08.2017ರ ಸರಬರಾಜು ಆದೇಶದ ಪ್ರತಿಯನ್ನು ದಿನಾಂಕ : 09.08.2017ರಂದು ಯಶಸ್ವಿ ಟೆಂಡರ್ದಾರರು ಪಡೆದಿದ್ದು, ಕಾರ್ಯಾದೇಶ ನೀಡಿದ 15 ದಿನಗಳೊಳಗಾಗಿ ಆಹಾರ ಪದಾರ್ಥ ವಿತರಣೆ ಪ್ರಾರಂಭಿಸುವಂತೆ ತಿಳಿಸಲಾಗಿತ್ತು. ಅದರಂತೆ ವೀರಾಜಪೇಟೆ ತಾಲೂಕಿನಲ್ಲಿ ಸುಮಾರು 2000 ಕುಟುಂಬಗಳ ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಿರುತ್ತಾರೆ. ಇನ್ನು 3 ದಿನಗಳಲ್ಲಿ ವೀರಾಜಪೇಟೆ ತಾಲೂಕಿಗೆ ವಿತರಣೆ ಮಾಡಿ ನಂತರ ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿಗೆ ವಾರದೊಳಗಾಗಿ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗುವದು.
ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ಪುನರ್ವಸತಿ ಕಂಡುಕೊಂಡಿರುವ ಗಿರಿಜನ ಕುಟುಂಬಗಳಿಗೆ ರೂ. 850/- ಮೊತ್ತದ ಆಹಾರ ಪದಾರ್ಥಗಳನ್ನು ಆಗಸ್ಟ್ 2017ರ ಮಾಹೆಯವರೆಗೆ ವಿತರಿಸಲು ಸರ್ಕಾರದಿಂದ ಆದೇಶವಿರುವಂತೆ ದಿನಾಂಕ : 11.05.2017ರಿಂದ ಆಗಸ್ಟ್ 2017ರ ಮಾಹೆಯ ಕೊನೆಯವರೆಗೆ ವಾರಕ್ಕೊಮ್ಮೆ ಅರ್ಹರಿರುವ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗಿರುತ್ತದೆ. ಸೆಪ್ಟೆಂಬರ್ ಮಾಹೆಯಲ್ಲಿ ಪೌಷ್ಠಿಕಾಂಶ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕಾಗಿದ್ದು, ಸದರಿ ತಿಂಗಳ ಆಹಾರ ಪದಾರ್ಥಗಳನ್ನು ಒಂದು ವಾರದೊಳಗಾಗಿ ವಿತರಣೆ ಮಾಡಲಾಗುವದು ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ, ಯಾವದೇ ಯೋಜನೆಯನ್ನು ಕಾರ್ಯಗತಗೊಳಿಸಬೇಕಾದರೆ ಸರ್ಕಾರದ ನಿಯಮದಂತೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.