ಮಡಿಕೇರಿ, ಸೆ. 21: ನಗರದ ಸಂತ ಜೋಸೆಫರ ಶಾಲೆ ಹಾಗೂ ಮೈಕಲರ ಶಾಲೆಗಳಿಗೆ ತಾ. 22 ರಿಂದ (ಇಂದಿನಿಂದ) ದಸರಾ ರಜೆ ಘೋಷಿಸಿರುವದಾಗಿ ವಿದ್ಯಾಲಯ ಮುಖ್ಯಸ್ಥರು ‘ಶಕ್ತಿ’ಗೆ ಖಚಿತಪಡಿಸಿದ್ದಾರೆ. ಜಿಲ್ಲಾಡಳಿತ ಕೊಡಗಿನ ವಿದ್ಯಾ ಸಂಸ್ಥೆಗಳಿಗೆ ದಸರಾ ಪ್ರಯುಕ್ತ ತಾ. 21 ರಿಂದ ಅಕ್ಟೋಬರ್ 5ರವರೆಗೆ ರಜೆ ಘೋಷಿಸಿತ್ತು.ಈ ಹಿನ್ನೆಲೆಯಲ್ಲಿ ಇಂದು ಸಂತ ಜೋಸೆಫರ ಶಾಲೆಗೆ ರಜೆ ನೀಡದ ಬಗ್ಗೆ ಆಕ್ಷೇಪಿಸಿ, ದಸರಾ ಸಮಿತಿಯ ಕೆಲವರು ಸೇರಿದಂತೆ ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಬಜರಂಗದಳದ ಗಣೇಶ್ ಕುಮಾರ್, (ಮೊದಲ ಪುಟದಿಂದ) ಯುವ ಮೋರ್ಚಾದ ಪ್ರಶಾಂತ್ ಮೊದಲಾದವರು ಶಾಲಾ ಮುಖ್ಯಸ್ಥರನ್ನು ಭೇಟಿಯಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಆ ಬೆನ್ನಲ್ಲೇ ಸ್ಪಂದಿಸಿದ ವಿದ್ಯಾಸಂಸ್ಥೆ ಮುಖ್ಯಸ್ಥರು ತಾ. 22 ರಿಂದ ದಸರಾ ರಜೆ ನೀಡಿರುವದಾಗಿ ಪ್ರಕಟಿಸಿದ್ದು, ಇಂದು ಮಕ್ಕಳು ಶಾಲೆಗೆ ಬಂದಿದ್ದರಿಂದ ಹಿಂತಿರುಗಲು ತೊಂದರೆಯಾಗ ದಂತೆ ಎಂದಿನಂತೆ ತರಗತಿಗಳನ್ನು ನಡೆಸಿರುವದಾಗಿ ‘ಶಕ್ತಿ’ಯೊಂದಿಗೆ ಸಮಜಾಯಿಸಿಕೆ ನೀಡಿದರು.
ಮಾತಿನ ಚಕಮಕಿ: ಆ ಬಳಿಕ ಈ ತಂಡ ನಗರದ ಸಂತ ಮೈಕಲರ ಶಾಲೆಗೆ ತೆರಳಿ, ದಸರಾ ರಜೆಗೆ ಬೇಡಿಕೆಯಿಟ್ಟಾಗ ಅಲ್ಲಿನ ಮುಖ್ಯಸ್ಥ ರೆ.ಫಾ. ರೋಹನ್ ಅವರು ಬಾಲಿಷ ವರ್ತನೆ ತೋರಿದ್ದಾಗಿ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಬಗ್ಗೆ ಎಚ್ಚರಿಕೆಯ ಮಾತನಾಡಿದ ಪ್ರಮುಖರು, ಶಿಕ್ಷಣ ಸಂಸ್ಥೆಗೆ ರಜೆ ಕೋರಿದಾಗ ಅಲ್ಪಸಂಖ್ಯಾತ, ಬಹುಸಂಖ್ಯಾತ ಮಕ್ಕಳು ಎಂದು ವರ್ಗೀಕರಿಸಿ ರಜೆ ನೀಡದೆ ಅಸಹಕಾರ ತೋರಿದ ರೋಹನ್ ಕ್ಷಮೆಯಾಚಿಸುವಂತೆ ಅಪರಾಹ್ನ ಪ್ರತಿಭಟನೆ ನಡೆಸುವದಾಗಿ ಘೋಷಿಸಿದರು.
ಈ ನಡುವೆ ರೆ.ಫಾ. ರೋಹನ್ ಹಾಗೂ ಇತರರು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಬಳಿ ತೆರಳಿ, ಇಂದಿನ ಬೆಳವಣಿಗೆ ಕುರಿತು ಮಾತುಕತೆ ನಡೆಸಿದ್ದಲ್ಲದೆ, ನಂತರ ತಂಡದ ಕ್ಷಮೆ ಕೋರಿದ ಪ್ರಸಂಗ ಎದುರಾಯಿತು. ತಾ. 22 ರಿಂದ (ಇಂದು) ಶಾಲೆಗಳಿಗೆ ರಜೆ ಘೋಷಿಸುವದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಸಂಘಟಕರು ಮಧ್ಯಾಹ್ನ ವಿದ್ಯಾಸಂಸ್ಥೆ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂತೆಗೆದು ಕೊಂಡರು.