ಮಡಿಕೇರಿ, ಸೆ. 21: ಸರಕಾರದಿಂದ ಮಂಜೂರಾಗಿರುವ ಅನುದಾನ ದಸರಾ ಉತ್ಸವ ನಡೆಸಲು ಸಾಕಾಗುವದಿಲ್ಲ. ಜಿಲ್ಲಾಡಳಿತದಿಂದ ಸಂಗ್ರಹಣೆ ಮಾಡಿ ಅನುದಾನ ನೀಡಿ ಇಲ್ಲವಾದಲ್ಲಿ ನಮಗೆ ದಸರಾ ಉತ್ಸವ ಮಾಡಲು ಆಗಲ್ಲ.., ಇದು ಮಡಿಕೇರಿ ನಗರ ದಸರಾ ಸಮಿತಿಯ ಉವಾಚ.., 50ಲಕ್ಷದಲ್ಲಿ ದಸರಾ ಮಾಡಬಹುದು, ನಿಮ್ಮಿಂದ ಆಗದಿದ್ದರೆ ನಾವು ಅಧಿಕಾರಿಗಳೇ ಮಾಡುತ್ತೇವೆ, ಇದು ಜಿಲ್ಲಾಡಳಿತದ ಉತ್ತರ..!

ಈ ಒಂದು ಬೆಳವಣಿಗೆ ಕಂಡು ಬಂದಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಮಡಿಕೇರಿ ದಸರಾ ಉತ್ಸವಕ್ಕೆ ಸರಕಾರ ರೂ. 50ಲಕ್ಷ ಅನುದಾನ ಮಂಜೂರು ಮಾಡಿದೆ. ಆದರೆ, ದಸರಾ ಸಮಿತಿ ಅದ್ಧೂರಿ ದಸರಾ ಆಚರಣೆಯ ಹಿನ್ನೆಲೆಯಲ್ಲಿ ರೂ. 94 ಲಕ್ಷ ಮೊತ್ತದ ಬಜೆಟ್ ಹಾಕಿಕೊಂಡು ರೂ. 1 ಕೋಟಿ ಅನುದಾನಕ್ಕೆ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಇದುವರೆಗೂ ಅನುದಾನ ಹೆಚ್ಚಳವಾಗುವ ಯಾವದೇ ಸೂಚನೆ ಕಂಡು ಬಾರದ ಹಿನ್ನೆಲೆಯಲ್ಲಿ ಇಂದು ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಕಾರ್ಯಾಧ್ಯಕ್ಷ

(ಮೊದಲ ಪುಟದಿಂದ) ಮಹೇಶ್ ಜೈನಿ, ದಶಮಂಟಪ ಸಮಿತಿ ಅಧ್ಯಕ್ಷ ಸತೀಶ್ ಧರ್ಮಪ್ಪ ಸೇರಿದಂತೆ ಇತರ ಉಪಸಮಿತಿಗಳ ಪ್ರಮುಖರು, ಸದಸ್ಯರುಗಳು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರಲ್ಲಿ ಅನುದಾನ ಸಂಗ್ರಹಿಸಿ ಕೊಡುವಂತೆ ಕೋರಿದರು.

ಈ ಹಿಂದೆ ಅನುದಾನದ ಕೊರತೆ ಇದ್ದ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸಂಗ್ರಹಣೆ ಮಾಡಿ ಕೊಡಲಾಗಿತ್ತು. ಅದೇ ರೀತಿ ಸಂಗ್ರಹಿಸಿ ಕೊಡುವಂತೆ ಕೋರಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಗಳು ಸರಕಾರದಿಂದಲೇ ಅನುದಾನ ಮಂಜೂರಾಗಿರುವಾಗ ಮತ್ತೆ ಸಂಗ್ರಹಿಸಿಕೊಡಲು ಅಸಾಧ್ಯವೆಂದು ಖಡಾಖಂಡಿತವಾಗಿ ನುಡಿದರು. ಅಸಮಾಧಾನಿತರಾದ ಸಮಿತಿ ಯವರು ಹಾಗಾದರೆ ತಮ್ಮಿಂದ ದಸರಾ ನಡೆಸಲು ಸಾಧ್ಯವಿಲ್ಲ. ಅನುದಾನ ಸಾಕಾಗುವದಿಲ್ಲವೆಂದು ವಾದ ಮಂಡಿಸಿದರು. ಅಷ್ಟೇ ನಾಜೂಕಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ನಿಮ್ಮಿಂದ ಸಾಧ್ಯವಾಗದಿದ್ದರೆ ಬಿಡಿ, 50ಲಕ್ಷದಲ್ಲಿ ಅಧಿಕಾರಿಗಳಿಂದ ನಾವೇ ದಸರಾ ಮಾಡುತ್ತೇವೆ. ದಸರಾ ನಾಡ ಹಬ್ಬವಾಗಿದ್ದು, ಯಾವದೇ ಕಾರಣಕ್ಕೂ ಕೈ ಬಿಡಲು ಸಾಧ್ಯವಿಲ್ಲ. ಮಂಟಪಗಳಿಗೆ ಕೊಡುವ ಅನುದಾನವನ್ನು ಕಡಿಮೆ ಮಾಡಿ ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.

ಇದಕ್ಕೆ ದಶಮಂಟಪ ಸಮಿತಿ ಯವರು ಅಸಮ್ಮತಿ ಸೂಚಿಸಿದರು. ದಶಮಂಟಪಗಳಿಲ್ಲದೆ ದಸರಾ ವೈಭವ ಇರುವದಿಲ್ಲ ಎಂದು ವಾದಿಸಿದರು. ದಶಮಂಟಪಗಳಿಗೆ ಹಣ ಸಂಗ್ರಹ ಮಾಡುತ್ತಾರಲ್ಲ ಹಾಗಾಗಿ ಅನುದಾನ ಬೇಕಾಗಿಲ್ಲವೆಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು. ಸರಕಾರಕ್ಕೆ ಪತ್ರ ಬರೆದು ಅನುದಾನ ಹೆಚ್ಚಿಗೆ ಒದಗಿಸಿಕೊಡುವಂತೆ ಸಮಿತಿಯವರು ಹೇಳಿದಾಗ, ಅದು ನಮ್ಮಿಂದ ಕಷ್ಟ ಸಾಧ್ಯ; ನೀವುಗಳೇ ಜನಪ್ರತಿನಿಧಿ ಗಳನ್ನು ಹಿಡಿದು ಮಾಡಿಸಿ ಕೊಳ್ಳಬೇಕೆಂದು ಉತ್ತರಿಸಿದರು.

ಅಂತಿಮವಾಗಿ ಯಾವದೇ ನಿರ್ಧಾರಕ್ಕೆ ಬರಲಾರದೆ ದಸರಾ ಸಮಿತಿಯವರು ಕಚೇರಿಯಿಂದ ಮರಳಿದರು. ಯಾವ ರೀತಿಯಲ್ಲಿ ದಸರಾ ಆಚರಿಸುವದು ಎಂಬ ಬಗ್ಗೆ ಚರ್ಚಿಸಿದರು. ಸಾಲ ಮಾಡಿ ದಸರಾ ಆಚರಿಸಲು ತನ್ನಿದಾಗದೆಂದು ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅಭಿಪ್ರಾಯಿಸಿದರೆ, ಈಗಾಗಲೇ ಮುಂಗಡ ಹಣ ಪಾವತಿ ಮಾಡಿರುವ ತಮ್ಮ ಪಾಡೇನು ಎಂದು ಉಪ ಸಮಿತಿಯವರು ಅವಲತ್ತು ಕೊಂಡರು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ನಗರಸಭೆ ನಿಧಿಯಿಂದ ಅನುದಾನಕ್ಕೆ ಪ್ರಯತ್ನಿಸಿದರಾದರೂ ನಿಯಮಾನುಸಾರ ನೀಡಲಾಗ ದೆಂಬ ಆಯುಕ್ತರ ಉತ್ತರಕ್ಕೆ ಸುಮ್ಮನಾದರು. ದಶಮಂಟಪ ಸಮಿತಿಯವರು ಪ್ರತ್ಯೇಕ ಸಭೆ ನಡೆಸಿ ಮತ್ತೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವ ಬಗ್ಗೆ ತೀರ್ಮಾನಿಸಿದರು.