ಮಡಿಕೇರಿ, ಸೆ. 21: ವಿದ್ಯಾರ್ಥಿನಿಯರಿಗೆ ಉದ್ಯೋಗ ಕೊಡಿಸುವದಾಗಿ ಫೀ.ಮಾ. ಕಾರ್ಯಪ್ಪ ಕಾಲೇಜಿನ 44 ಮಕ್ಕಳಿಗೆ ವಂಚಿಸಿರುವ ಪ್ರಕರಣ ಸಂಬಂಧ ಇತಿಹಾಸಶಾಸ್ತ್ರ ಉಪನ್ಯಾಸಕ ಕುಮಾರಸ್ವಾಮಿ ಅವರನ್ನು ಬೇರೆಡೆಗೆ ವರ್ಗಾಯಿಸುವಂತೆ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿತು.

ಉಪನ್ಯಾಸಕ ಕುಮಾರಸ್ವಾಮಿ ಪ್ರಕರಣದಲ್ಲಿ ನೇರ ಶಾಮಿಲಾಗಿ ವಿದ್ಯಾರ್ಥಿನಿಯರಿಗೆ ವಂಚಿಸಿದ್ದಲ್ಲದೆ, ಗಣೇಶ ಶೆಟ್ಟಿ ಎಂಬ ವ್ಯಕ್ತಿಯೊಡನೆ ಸೇರಿ ಹಣ ವಸೂಲಿ ಮಾಡಿದ್ದು, ತಕ್ಷಣ ಇಲ್ಲಿಂದ ವರ್ಗಾಯಿಸಬೇಕೆಂದು ಎಬಿವಿಪಿ ಪ್ರಮುಖರು ಆಗ್ರಹಿಸಿದರು. ಈ ಸಂಬಂಧ ವಿವಿ ವಿರುದ್ಧ ದಿಕ್ಕಾರ ಕೂಗಿದರಲ್ಲದೆ, ಕ್ರಮ ಕೈಗೊಳ್ಳದಿದ್ದರೆ, ಮುಂದೆ ತೀವ್ರ ಪ್ರತಿಭಟನೆ ನಡೆಸಲಿರುವದಾಗಿ ಘೋಷಿಸಿದರು. ವಿದ್ಯಾರ್ಥಿ ನಾಯಕರ ಸಹಿತ ಸಂಘಟನೆ ಪ್ರಮುಖರು ಹಾಜರಿದ್ದರು.

ಗೋಣಿಕೊಪ್ಪಲು: ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸಿದ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರುಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ಉಮಾಮಹೇಶ್ವರಿ ದೇವಾಲಯ ಆವರಣದಿಂದ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರುಗಳು ಗ್ರಾಮ ಪಂಚಾಯ್ತಿಗೆ ತೆರಳಿ ಪ್ರಕರಣವನ್ನು ಖಂಡಿಸಿ ಘೋಷಣೆ ಕೂಗಿದರು. ನಂತರ ಪಿಡಿಒ ಚಂದ್ರಮೌಳಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.